ನವದೆಹಲಿ:ಕೃಷಿ ಕಾಯ್ದೆಗಳ ವಿಚಾರದಲ್ಲಿ ರಚಿಸಿರುವ ಸಮಿತಿಗೆ ಕಾಯ್ದೆಗಳನ್ನು ಊರ್ಜಿತಗೊಳಿಸಬೇಕೋ ಅಥವಾ ಅನೂರ್ಜಿತಗೊಳಿಸಬೇಕೋ ಎಂದು ಹೇಳುವ ಅಧಿಕಾರವಿಲ್ಲ. ಹೀಗಾಗಿ ಸಮಿತಿ ರಚನೆ ಪಕ್ಷಪಾತ ಹೇಗಾಗುತ್ತದೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸಮಿತಿ ರಚನೆ ವಿಚಾರವಾಗಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ವಿಚಾರದಲ್ಲಿ ಎಲ್ಲರ ಅಭಿಪ್ರಾಯವನ್ನು ಪಡೆದು, ಅದರ ವರದಿಯನ್ನು ನಮಗೆ ಸಲ್ಲಿಸುವುದಷ್ಟೇ ಸಮಿತಿಯ ಕರ್ತವ್ಯವಾಗಿದ್ದು, ಇದರಲ್ಲಿ ಪಕ್ಷಪಾತ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ ಸಮಿತಿಯ ಪುನರ್ ರಚನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹಿಂದಿನ ವಾರ ಕೃಷಿ ಕಾಯ್ದೆಗಳ ಜಾರಿಗೆ ತಡೆಯಾಜ್ಞೆ ತಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.
ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿ, ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿತ್ತು. ರಚಿಸಲಾಗಿದ್ದ ಸಮಿತಿ ಕೇಂದ್ರ ಸರ್ಕಾರದ ಪರವಾಗಿದೆಯೆಂದೂ, ತಾವು ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.