ಗೋರಖ್‌ಪುರ(ಯುಪಿ):16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ವಿವಾಹಿತ ಕಾಮುಕನೊಬ್ಬ ಆಕೆಗೆ ಜನಿಸಿದ್ದ ನವಜಾತ ಶಿಶುವಿನ ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಮಗುವಿನ ಕೊಲೆ ಮಾಡಲು ಸಹಾಯ ಮಾಡಿರುವ ಅಪ್ರಾಪ್ತೆ ತಾಯಿಯನ್ನ ಈಗಾಗಲೇ ಪೊಲೀಸರು ಬಂಧನ ಮಾಡಿದ್ದಾರೆ. ಘಟನೆ ನಡೆದ ಬಳಿಕ ಕಾಮುಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಪಿಪಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಮದುವೆಯಾಗಿದ್ದ ವಿಭಾಷ್, ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಇದರ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿದ್ದು, ಕಳೆದ ಕೆಲ ವಾರಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಭಾಷ್, ಮಗುವನ್ನ ಕೊಲೆ ಮಾಡಿದ್ದಾನೆ. ಕೃತ್ಯಕ್ಕೆ ಬಾಲಕಿ ತಾಯಿ ಸಹಾಯ ಮಾಡಿದ್ದು, ಶವವನ್ನ ಪೊದೆಯಲ್ಲಿ ಎಸೆದು ಬಂದಿದ್ದಾರೆ. ನವಜಾತ ಶಿಶುವಿನ ಕುರಿತು ದೂರು ದಾಖಲು ಮಾಡಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಸಂಪೂರ್ಣ ಪ್ರಕರಣದ ಬಗ್ಗೆ ಗೊತ್ತಾಗಿದೆ.
ಘಟನೆ ಬಗ್ಗೆ ಬಾಲಕಿ ಮತ್ತು ತಾಯಿಯನ್ನ ವಿಚಾರಿಸಿದಾಗ ನಿಜಾಂಶ ಹೊರಹಾಕಿದ್ದಾರೆ. ಇದೀಗ ಅತ್ಯಾಚಾರ, ಬೆದರಿಕೆ,ಕೊಲೆ, ಸಾಕ್ಷ್ಯ ಮರೆಮಾಚುವುದು, ಕ್ರಿಮಿನಲ್ ಪಿತೂರಿ ಹಾಗೂ ಲೈಂಗಿಕ ಅಪರಾದ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.