ಕರ್ನಾಟಕ

karnataka

ETV Bharat / bharat

ದಾವೂದ್​ ಸಹಾಯಕನ ಜೊತೆ ನಂಟು! ಮಾಜಿ ಕೇಂದ್ರ ಸಚಿವರಿಗೆ ಇಡಿ ಸಮನ್ಸ್ - Iqbal mirchi

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯಕ ಇಕ್ಬಾಲ್ ಮಿರ್ಚಿಯ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಜಾರಿ ನಿರ್ದೇಶನಾಲಯ ಮಂಗಳವಾರ ಹಿರಿಯ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್​ಗೆ ಸಮನ್ಸ್​ ಜಾರಿ ಮಾಡಿದೆ.

ಹಿರಿಯ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್​

By

Published : Oct 16, 2019, 9:30 AM IST

ಮುಂಬೈ: ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಸಹಾಯಕ ಹತ ಇಕ್ಬಾಲ್ ಮಿರ್ಚಿಯ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಗೆ ಇಡಿ ಮಂಗಳವಾರ ಹಿರಿಯ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್​ಗೆ ಸಮನ್ಸ್​ ನೀಡಿದೆ. ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಪಟೇಲ್, ಅಕ್ಟೋಬರ್ 18 ರಂದು ಮುಂಬೈನ ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಎನ್‌ಸಿಪಿ ಮುಖಂಡ ಹಾಗು ಕೇಂದ್ರದ ಮಾಜಿ ಸಚಿವ ಪ್ರಫುಲ್​ ಪಟೇಲ್, ಪತ್ನಿ ಹಾಗೂ ಮಿರ್ಚಿಯ ಪತ್ನಿ ಹಜ್ರಾ ಮೆಮನ್ ನಡುವಿನ ರಿಯಲ್ ಎಸ್ಟೇಟ್ ಕಂಪನಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪಟೇಲ್ ಅವರ ಹೇಳಿಕೆಯನ್ನು ಜಾರಿ ಅಧಿಕಾರಿಗಳು ದಾಖಲಿಸುವ ಸಾಧ್ಯತೆಯಿದೆ.

ಪಟೇಲ್ ಹೇಳುವುದೇನು?

ಇಡಿ ನೋಟಿಸ್​ ಬಳಿಕ ಪ್ರತಿಕ್ರಿಯಿಸಿರುವ ಪ್ರಫುಲ್‌ ಪಟೇಲ್‌, ತಮ್ಮ ಮೇಲಿನ ಆಪಾದನೆಯನ್ನು ಅಲ್ಲಗಳೆದಿದ್ದಾರೆ. ಇಕ್ಬಾಲ್‌ ಮಿರ್ಚಿ ಕುಟುಂಬ ಹಾಗೂ ನನ್ನ ಕುಟುಂಬದ ಮಿಲೇನಿಯಂ ಡೆವಲಪರ್ಸ್​ ನಡುವೆ ಯಾವುದೇ ಹಣದ ವ್ಯವಹಾರ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ :

ಇಡಿ ಅಧಿಕಾರಿಗಳ ಪ್ರಕಾರ, ಪಟೇಲ್‌ ಮಿಲೇನಿಯಮ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ 2006-07ರಲ್ಲಿ ಸೀಜಯ್ ಹೌಸ್ ಎಂಬ ಕಟ್ಟಡವನ್ನು ನಿರ್ಮಿಸಿದೆ. ಈ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಗಳನ್ನು ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್‌ಗೆ ವರ್ಗಾಯಿಸಲಾಗಿದೆ. ಕಟ್ಟಡದ ಗೋಪುರವನ್ನು ನಿರ್ಮಿಸಿದ ಭೂಮಿ ಮಿರ್ಚಿಯ ಒಡೆತನದಲ್ಲಿದೆ ಎಂದು ಹೇಳಲಾಗುತ್ತದೆ. ಮನಿ ಲಾಂಡರಿಂಗ್, ಡ್ರಗ್ಸ್ ಕಳ್ಳಸಾಗಣೆ ಮತ್ತು ಸುಲಿಗೆ ಅಪರಾಧಗಳ ಆದಾಯದಿಂದ ಈ ಭೂಮಿಯನ್ನು ಖರೀದಿಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ABOUT THE AUTHOR

...view details