ನವದೆಹಲಿ:ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ಈಕ್ವಿಡಾರ್ ಬಳಿ ದ್ವೀಪ ಖರೀದಿಸಿ ಅಲ್ಲಿಯೇ ಒಂದು ಹಿಂದೂ ರಾಷ್ಟ್ರ ಸ್ಥಾಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. 'ಭಾರತ ತೊರೆದಿರುವ ನಿತ್ಯಾನಂದ ಸ್ವಾಮಿಗೆ ಈಕ್ವೆಡಾರ್ ಆಶ್ರಯ ನೀಡಿಲ್ಲ' ಎಂದು ಅಲ್ಲಿನ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಆತ ಹೈಟಿಯಲ್ಲಿ ಇರಬಹುದು ಎಂದು ಹೇಳಲಾಗ್ತಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ನಿತ್ಯಾನಂದ, ನೇಪಾಳ ಮೂಲಕ ಭಾರತದಿಂದ ಪಲಾಯನ ಮಾಡಿ ಈಕ್ವೆಡಾರ್‌ನಲ್ಲಿ ಒಂದು ದ್ವೀಪವನ್ನು ಖರೀದಿಸಿ ಅಲ್ಲಿಯೇ ತನ್ನದೇ ಆದ ‘ಸಾರ್ವಭೌಮ ಹಿಂದೂ ದೇಶ’ ಸ್ಥಾಪಿಸಿದ್ದಾನೆ ಎಂದು ವರದಿಗಳು ಕಳೆದ ವಾರ ಹೊರಬಿದಿದ್ದವು.
ದೇಶ ತೊರೆದಿರುವ ನಿತ್ಯಾನಂದನನ್ನು ಭಾರತೀಯ ತನಿಖಾಧಿಕಾರಿಗಳು ಹುಡುಕುತ್ತಿರುವಾಗಲೇ ಟ್ರಿನಿಡಾಡ್ ಮತ್ತು ಟೊಬಾಗೊ ಬಳಿಯ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಈಕ್ವೆಡಾರ್‌ನ ರಾಯಭಾರ ಕಚೇರಿ, 'ನಿತ್ಯಾನಂದ ಹೈಟಿಯಲ್ಲಿ ಇರಬಹುದು' ಎಂಬ ಸುಳಿವು ಸಹ ಕೊಟ್ಟಿದೆ.
ಭಾರತ ತೊರೆದ ಸ್ವಯಂಘೋಷಿತ ದೇವಮಾನವ ನಿತ್ಯಾನಂದನಿಗೆ ಈಕ್ವೆಡಾರ್ ಆಶ್ರಯ ನೀಡಿಲ್ಲ. ಈಕ್ವೆಡಾರ್ ಹತ್ತಿರ ಅಥವಾ ದೂರದಲ್ಲಿರುವ ದಕ್ಷಿಣ ಅಮೆರಿಕದಲ್ಲಿ ಯಾವುದೇ ಭೂಮಿ ಅಥವಾ ದ್ವೀಪವನ್ನು ಖರೀದಿಸಲು ನಮ್ಮ ಸರ್ಕಾರ ಸಹಾಯ ಮಾಡಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾದವು ಎಂದು ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದೆ.
ನಿತ್ಯಾನಂದ ಭಾರತದಿಂದ ಓಡಿಹೋಗಿ ಈಕ್ವೆಡಾರ್‌ನಲ್ಲಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟುಕೊಂಡು ಕೈಲಾಸ್ ಡಾಟ್ ಒಆರ್ಜಿ ( https://kailaasa.org) ಹೆಸರಿನ ವೆಬ್ ಸೈಟ್ ಒಂದನ್ನು ಆರಂಭಿಸಿ, ಅದರಲ್ಲಿ ತನ್ನ ದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ಸಾಕಷ್ಟು ವರದಿಗಳ ಬಂದಿದ್ದವು.
ಕರ್ನಾಟಕ ಪೊಲೀಸರು ಹೇಳುವ ಪ್ರಕಾರ ಜಾಮೀನು ಪಡೆದಿದ್ದ ನಿತ್ಯಾನಂದ 2018ರ ಅಂತ್ಯದಲ್ಲಿ ದೇಶದಿಂದ ಪರಾರಿ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ವಿದೇಶಾಂಗ ಇಲಾಖೆ ಮೂಲಗಳ ಪ್ರಕಾರ, ಆತನ ಪಾಸ್ಪೋರ್ಟ್ ಅವಧಿ 2018 ರ ಸೆಪ್ಟೆಂಬರ್ನಲ್ಲಿ ಮುಗಿದಿದೆಯಂತೆ. ಆತ ತನ್ನ ಪಾಸ್ಪೋರ್ಟ್ ರಿನಿವಲ್ ಮಾಡಿಸಿಲ್ಲ ಎಂದೂ ಇಲಾಖೆ ಹೇಳಿದೆ. ಹೀಗಾಗಿ ಆತ ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ. ಈಕ್ವೆಡಾರ್ ನೊಂದಿಗೆ ಭಾರತ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. ಆದಾಗ್ಯೂ ಈಕ್ವೆಡಾರ್ ಈ ಸ್ಪಷ್ಟನೆ ನೀಡಿದೆ.