ತಿರುಪತಿ: ಅಪರಿಚಿತ ಭಕ್ತರೊಬ್ಬರು ಇಲ್ಲಿನ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ 20 ಚಿನ್ನದ ಬಿಸ್ಕತ್ತುಗಳನ್ನು ಅರ್ಪಿಸಿದ್ದಾರೆ.
ಶನಿವಾರದಂದು ದಿನದ ಹಣದ ಸಂಗ್ರಹವನ್ನು ಎಣಿಸುತ್ತಿರುವಾಗ ದೇಗುಲದ ಕಾಣಿಕೆ ಹುಂಡಿಯಲ್ಲಿ 2 ಕೆಜಿ ತೂಕದ ಚಿನ್ನದ ಬಿಸ್ಕತ್ತುಗಳು ಸಿಕ್ಕಿವೆ ಎಂದು ತಿರುಮಲ ತಿರುಪತಿ ದೇವಸ್ವಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಈ ಮಾಹಿತಿ ನೀಡಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಜೂನ್ 11 ರಂದು ದೇವಾಲಯದ ಬಾಗಿಲು ತೆರೆಯಲಾಗಿತ್ತು. ಕಳೆದ ಒಂದು ತಿಂಗಳಲ್ಲಿ 2.5 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, 6.7 ಕೋಟಿ ರೂ. ಹಣ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಪೂಜೆಗೆ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಸುಮಾರು 67 ಸಾವಿರ ಭಕ್ತರು ಕೊರೊನಾ ಭೀತಿ ಸೇರಿದಂತೆ ಇತರ ಕಾರಣಗಳಿಂದ ದೇವಾಲಯಕ್ಕೆ ಭೇಟಿ ನೀಡಿಲ್ಲ ಎಂದು ಸಿಂಘಾಲ್ ತಿಳಿಸಿದ್ದಾರೆ.
ಒಟ್ಟು 3,569 ಟಿಟಿಡಿ ಸಿಬ್ಬಂದಿಯ ಪೈಕಿ 91 ಮಂದಿಗೆ ಸೋಂಕು ದೃಢವಾಗಿದೆ ಎಂದು ಸಿಂಘಾಲ್ ಹೇಳಿದರು.