ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಗಳನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ದಂಪತಿ ಜಹಂಜೇಬ್ ಸಮಿ ಮತ್ತು ಪತ್ನಿ ಹೀನಾ ಬಶೀರ್ ಬೇಗ್ ಐಸಿಸ್ ಉಗ್ರ ಸಂಘಟನೆ (ISIS) ಜೊತೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.
ಶ್ರೀನಗರದ ಜಹನ್‌ಜೈಬ್ ಸಮಿ ಮತ್ತು ಅವರ ಪತ್ನಿ ಹೀನಾ ಬಶೀರ್ ಬೇಗ್ ಅವರನ್ನು ದೆಹಲಿಯ ವಿಶೇಷ ತಂಡ ವಶಕ್ಕೆ ತೆಗೆದುಕೊಂಡಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹಾ ತಿಳಿಸಿದ್ದಾರೆ. ಐಸಿಸ್‌ನ ಖೋರಾಸನ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದ ಜಹಂಜೇಬ್ ಸಾಮಿ ಮತ್ತು ಹೀನಾ ಬಶೀರ್ ಬೀಗ್ ದಂಪತಿಯನ್ನು ಓಖ್ಲಾದ ಜಾಮಿಯಾ ನಗರದಿಂದ ಬಂಧಿಸಲಾಗಿದೆ. ಈ ದಂಪತಿ ಸಿಎಎ ವಿರೋಧಿ ಪ್ರತಿಭಟನೆಯನ್ನು ಪ್ರಚೋದಿಸುತ್ತಿದ್ದರು ಎಂದು ಕುಶ್ವಾಹಾ ಹೇಳಿದರು.
ಸೈಬರ್ ಸೆಂಟರ್ನ ಚಟುವಟಿಕೆಗಳಿಂದಾಗಿ ಜಹಂಜೇಬ್ ಸಮಿ ಬಂಧಿಸಲ್ಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಿಎಎ ಕಾಯ್ದೆ ವಿರೋಧಿಸಿ ಭಾರತೀಯ ಮುಸ್ಲಿಮರನ್ನು ಒಗ್ಗೂಡಿಸಿ ಭಾರತದ ವಿರುದ್ಧ ಹೋರಾಡಲು ಕರೆ ನೀಡುವ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪ್ಲಾನ್ ರೂಪಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಅಲ್ಲದೆ ಸಿಎಎ ವಿರುದ್ಧ ತನ್ನ ಯೋಜಿತ ಚಟುವಟಿಕೆಗಳಿಗಾಗಿ ಬಂದೂಕುಗಳು ಮತ್ತು ಮದ್ದುಗುಂಡುಗಳ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾನೆ. 2020ರ ಫೆಬ್ರವರಿಯಲ್ಲಿ ಪ್ರಕಟವಾದ ಐಸಿಸ್ ನಿಯತಕಾಲಿಕೆ 'ಸಾತ್ ಅಲ್-ಹಿಂದ್ '(ವಾಯ್ಸ್ ಆಫ್ ಇಂಡಿಯಾ) ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸಮಿ ಆಪ್ತರಾದ ಖಟ್ಟಾಬ್ ವಾಸ್ತವವಾಗಿ ಅಬ್ದುಲ್ಲಾ ಬಸಿತ್ ಆಗಿದ್ದು, ಈತ ಪ್ರಸ್ತುತ ಐಸಿಸ್ ಸಂಬಂಧಿತ ಪ್ರಕರಣಗಳಲ್ಲಿ ತಿಹಾರ್ ಜೈಲು ಪಾಲಾಗಿದ್ದಾನೆ.
ಈತನ ಪತ್ನಿ ಹೀನಾ, ಕ್ಯಾಟಿಜಾ ಅಲ್ ಕಾಶ್ಮೀರಿ/ ಹನ್ನಾಬಿ ಹೆಸರಿನಲ್ಲಿ ಐಸಿಸ್ ಪರ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಳು ಮತ್ತು ಸೈಬರ್‌ಪೇಸ್‌ನಲ್ಲಿ ಕೆಲವರನ್ನು ಗುರುತಿಸುವಲ್ಲಿ ಅವರನ್ನು ಮತ್ತಷ್ಟು ಪ್ರೇರೇಪಿಸುವಲ್ಲಿ ಫೆಸಿಲಿಟೇಟರ್ ಪಾತ್ರವನ್ನು ನಿರ್ವಹಿಸುತಿದ್ದಳು ಎಂದು ತಿಳಿದು ಬಂದಿದೆ.