ಕರಾಚಿ (ಪಾಕಿಸ್ತಾನ):ಪಾಕಿಸ್ತಾನದಲ್ಲಿ ಬಹು ಮಹಡಿ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 11 ಮೃತ ದೇಹಗಳನ್ನು ಕಟ್ಟಡದ ಮೊದಲ ಮಹಡಿಯಿಂದ ಹೊರತೆಗೆಯಲಾಗಿದೆ. ಇದರಿಂದಾಗಿ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಭಾನುವಾರ ರಾತ್ರಿ ಕರಾಚಿಯ ಲ್ಯಾರಿ ಪ್ರದೇಶದಲ್ಲಿ 6 ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದಿತ್ತು. ಆಗಿನಿಂದಲೇ ರಕ್ಷಣಾ ಕಾರ್ಯಾಚರಣೆ ಶುರುವಾಗಿದ್ದು, ಸೋಮವಾರ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಮಂಗಳವಾರ ಮತ್ತೆ 11 ಮೃತದೇಹಗಳನ್ನು ಮೊದಲನೇ ಅಂತಸ್ತಿನಿಂದ ಹೊರತೆಗೆದಿದ್ದು, ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಈ ಘಟನೆಯಲ್ಲಿ 12 ಮಂದಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಓರ್ವ ಗಾಯಾಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.