ಚಂಡೀಗಢ(ಪಂಜಾಬ್):ಪಂಜಾಬ್ನಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿರುವ ಕಾರಣ ಪ್ರಸಕ್ತ ವರ್ಷದ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸದಿರಲು ನಿರ್ಧರಿಸಿದ್ದು, ಶಾಲೆಯಲ್ಲಿ ನಡೆದಿರುವ ಪರೀಕ್ಷೆಗಳ ಆಧಾರದ ಮೇಲೆ ಎಲ್ಲ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗಳಿಗೆ ಪಾಸ್ ಮಾಡಲು ಪಂಜಾಬ್ ಸರ್ಕಾರ ನಿರ್ಧರಿಸಿದೆ.
ಈಗಾಗಲೇ 1ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಅದರ ಬೆನ್ನಲ್ಲೇ ಇದೀಗ 10ನೇ ತರಗತಿ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯ ಮಾಡಲು ತೀರ್ಮಾನ ತೆಗೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್, 10ನೇ ತರಗತಿ ವಿದ್ಯಾರ್ಥಿಗಳು ಪಂಜಾಬ್ ಬೋರ್ಡ್ ಪರೀಕ್ಷೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರು ಶಾಲೆಯಲ್ಲಿ ಬರೆದಿರುವ ಪರೀಕ್ಷೆಗಳ ಆಧಾರ ಹಾಗೂ ಅಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಅನೇಕ ರಾಜ್ಯಗಳು ಈ ನಿರ್ಧಾರ ಕೈಗೊಂಡಿದ್ದು, ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗಳಿಗೆ ಪಾಸ್ ಮಾಡಲು ಮುಂದಾಗಿವೆ. ಇನ್ನು ದೇಶದಲ್ಲಿ 10ನೇ ಹಾಗೂ 12ನೇ ತರಗತಿ ಸಿಬಿಎಸ್ಇ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಈಗಾಗಲೇ ದಿನಾಂಕ ಘೋಷಣೆ ಮಾಡಿದ್ದು, ಜುಲೈ 1ರಿಂದ 15ರವರೆಗೆ ಈ ಪರೀಕ್ಷೆ ನಡೆಯಲಿವೆ ಎಂದು ನಿನ್ನೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವರು ತಿಳಿಸಿದ್ದಾರೆ.