ಭುವನೇಶ್ವರ (ಒಡಿಶಾ) :ಕೊರೊನಾ ವೈರಸ್ನ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮಗೆ ಎಲ್ಲಕ್ಕಿಂತ ಸಮಾಜದ ಸುರಕ್ಷತೆ ಮುಖ್ಯ ಎಂದು ತಮ್ಮ ಮದುವೆ ಮುಂದೂಡಿ ಕರ್ತವ್ಯಕ್ಕೆ ಹಾಜರಾದ ಇಬ್ಬರು ಮಹಿಳಾ ಪೊಲೀಸ್ ಪೇದೆಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಮದುವೆ ಮುಂದೂಡಿ ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆಗಳು ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸುಂದರ್ಗಢ ಜಿಲ್ಲೆಯ ಇಬ್ಬರು ಮಹಿಳಾ ಪೇದೆಗಳಾದ ತಿಲೋಟಮಾ ಮೆಹರ್ ಹಾಗೂ ಸುನಿತಾ ಆಧಾ ತಮ್ಮ ಕರ್ತವ್ಯ ಬದ್ದತೆ ಮೆರೆದವರು.
ಹೋಂ ಗಾರ್ಡ್ ಆಗಿರುವ ತಿಲೋಟಮಾ ಮೆಹರ್ ವಿವಾಹವನ್ನು ಏಪ್ರಿಲ್ 12 ಕ್ಕೆ ನಿಗದಿಪಡಿಸಲಾಗಿತ್ತು ಮತ್ತು, ಪೇದೆ ಸುನೀತಾ ಅಧಾ ವಿವಾಹವನ್ನು ಏಪ್ರಿಲ್ 25ಕ್ಕೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ, ಈ ಮಧ್ಯೆ ಕೊರೊನಾ ಕಂಟಕ ಎದುರಾಗಿದ್ದರಿಂದ ತನ್ನ ಮದುವೆಗಿಂತ ಸಮಾಜದ ಜನರ ಸುರಕ್ಷತೆ ಮುಖ್ಯ ಎಂದ ಪೇದೆ ತಿಲೋಟಮಾ, ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇದರ ಬೆನ್ನಲ್ಲೆ ಬಿರ್ಮಿತ್ರಾಪುರಕ್ಕೆ ನಿಯೋಜನೆಗೊಂಡ ಪೇದೆ ಸುನೀತಾ ಅಧಾ ಕೂಡ ಇದೇ ನಿರ್ಧಾರವನ್ನು ಕೈಗೊಂಡಿದ್ದು, ತನ್ನ ವಿವಾಹಕ್ಕಿಂತ ಸಾರ್ವಜನಿಕರ ಸುರಕ್ಷೆ ಮುಖ್ಯ ಎಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಡಿಜಿಪಿ ಅಭಯ್ ಮಾಹಿತಿ ನೀಡಿದ್ದಾರೆ.
ಸದ್ಯ ಇಬ್ಬರು ಮಹಿಳಾ ಪೇದೆಗಳ ಕರ್ತವ್ಯ ಬದ್ದತೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಈ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ , ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾವಿರಾರು ಪೊಲೀಸರು ತಮ್ಮ ವೈಯಕ್ತಿಕ ಕಾರ್ಯಗಳು, ಕುಟುಂಬ ಎಲ್ಲವನ್ನೂ ತ್ಯಾಗ ಮಾಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ತ್ಯಾಗವನ್ನು ನಾವೆಲ್ಲ ಗೌರವಿಸೋಣ. ನಿಮ್ಮ ಮತ್ತು ಸಮಾಜದ ಸುರಕ್ಷತೆಗೆ ಲಾಕ್ ಡೌನ್ನ್ನು ಪಾಲಿಸಿ ಎಂದು ಹೇಳಿದ್ದಾರೆ.