ಜೈಪುರ: ಕನಿಷ್ಠ ಆದಾಯ ಭದ್ರತೆ ಯೋಜನೆಯು ಕಾಂಗ್ರೆಸ್ ಬಡತನದ ಮೇಲೆ ನಡೆಸುತ್ತಿರುವ ಸರ್ಜಿಕಲ್ ಸ್ಟ್ರೈಕ್. ಬಡತನವನ್ನು ನಾವು ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.
ರಾಜಸ್ಥಾನದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನ್ಯೂಂತಮ್ ಆಯ್ ಯೋಜನೆ (NYAY)ಯ ಕರಡು ಸಿದ್ಧಪಡಿಸುವಾಗ ಕಾಂಗ್ರೆಸ್, ಆರ್ಬಿಐನ ನಿವೃತ್ತ ಗವರ್ನರ್ ರಘುರಾಂ ರಾಜನ್ರಂತಹ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು ಎಂದು ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮಾಸಿಕ ₹12,00ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಕ್ಕೆ ₹6000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುವುದು. ಇದರಿಂದ ಭಾರತದ ಶೇ.20ರಷ್ಟು ಕಡುಬಡವರ ಕುಟುಂಬಗಳು ವಾರ್ಷಿಕ 72,000 ಆರ್ಥಿಕ ಭದ್ರತೆಯನ್ನು ಪಡೆಯಲಿವೆ ಎಂದರು.
ಇದು ಉಚಿತ ಉಡುಗೊರೆಯಲ್ಲ, ಬದಲಾಗಿ ಬಡವರಿಗೆ ಸಲ್ಲುವ ನ್ಯಾಯ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ಬಡತನದ ವಿರುದ್ದ ನಾವು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದರು. ಕಾಂಗ್ರೆಸ್ ಯೋಜನೆ ರೂಪುರೇಷೆ ನಿರ್ಧರಿಸಲು 6 ತಿಂಗಳ ಕಾಲ ಜಗತ್ತಿನ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು. ಆದರೆ, ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ ಎಂದರು.ಈ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಘುರಾಂ ರಾಜನ್, ಈ ಬಗ್ಗೆ ಸುಳಿವು ನೀಡಿದ್ದರು. ಈ ಮೊದಲು ರಘುರಾಂ ರಾಜನ್, ರಾಹುಲ್ ಗಾಂಧಿಯವರ ಈ ಯೋಜನೆ ಸುಲಭವಲ್ಲ. ಆದರೆ, ಒಳ್ಳೆ ಯೋಜನೆ ಅಂತಾ ಹೇಳಿಕೊಂಡಿದ್ದರು.