ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸಿದ್ದ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಪಡೆ, ಈ ಬಾರಿ ಸರಳ ಬಹುಮತವನ್ನೂ ಪಡೆಯುವುದು ಕಷ್ಟವಾಗಿದೆ ಎಂದು ಫಿಚ್ ಸೆಲ್ಯೂಷನ್ ಮ್ಯಾಕ್ರೋ ರೀಸರ್ಚ್ ಸಂಸ್ಥೆ ಪ್ರಕಟಿಸಿದೆ.
ಇನ್ನು ರಾಹುಲ್ ನೇತೃತ್ವ ಕೈ ಪಡೆ ಸ್ಥಳೀಯ ಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದೂ ಹೇಳಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸುವುದಿಲ್ಲ. ಎರಡೂ ಪಕ್ಷಗಳಿಗೆ ಸ್ಥಳೀಯ ಪಕ್ಷಗಳೇ ಕಿಂಗ್ ಮೇಕರ್ ಆಗಲಿವೆ ಎಂದು ತಿಳಿದುಬಂದಿದೆ.
ಬಿಜೆಪಿ ಸ್ಥಳೀಯ ಪಕ್ಷಗಳೊಂದಿಗಿನ ಮೈತ್ರಿಯತ್ತ ಅಷ್ಟಾಗಿ ಗಮನ ಹರಿಸುತ್ತಿಲ್ಲವಾದ್ದರಿಂದ, ಈಗಾಗಲೆ ಹಲವು ಸ್ಥಳೀಯ ಪಕ್ಷಗಳೊಂದಿಗೆ ಸೇರಿ ಮಹಾಘಟಬಂಧನ್ ರಚಿಸಿಕೊಂಡಿರುವ ರಾಹುಲ್ ಪಡೆ ಸರ್ಕಾರ ರಚನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸಂಸ್ಥೆ ಹೇಳಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ ನಂತರ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು, ಪಕ್ಷಕ್ಕೆ ಜನ ಬೆಂಬಲ ಕಡಿಮೆಯಾಗಲಿದೆ ಎಂದು ಮಾಹಿತಿ ಹೊರಹಾಕಿದ್ದವು. ಇಂಡಿಯಾ ಟುಡೇ ಸಮೀಕ್ಷೆ ಸಹ ಎನ್ಡಿಎ ಮತಬಲ 237 ಸ್ಥಾನಗಳಿಗೆ ಇಳಿಕೆಯಾಗಲಿದೆ ಎಂದು ಸಮೀಕ್ಷೆ ಮೂಲಕ ಹೇಳಿತ್ತು. ಇದೀಗ ಮತ್ತೊಂದು ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಮರೀಚಿಕೆ ಎಂಬ ಸೂಚನೆ ನೀಡಿದೆ.