ಭೋಪಾಲ್ (ಮಧ್ಯಪ್ರದೇಶ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳು ಹಾಕುತ್ತಿರುವ ಬ್ಯಾನರ್ಗಳು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿವೆ. ಇತ್ತೀಚೆಗೆ ಬಾಹುಬಲಿಯಾಗಿ, ರಾಮನ ವೇಷದಲ್ಲಿ ಬ್ಯಾನರ್ಗಳಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಗಾಂಧಿರನ್ನು ಈಗ ಬ್ಯಾನರ್ವೊಂದು ರಾಮಭಕ್ತನಂತೆ ಚಿತ್ರಿಸಿರುವುದು ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನಾಳೆ (ಫೆಬ್ರವರಿ 8) ರಂದು ಭೋಪಾಲ್ಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಬ್ಯಾನರ್ ಮೂಲಕ ರಾಗಾಗೆ ಸ್ವಾಗತ ಕೋರಿದೆ. ಆದರೆ ಇದರಲ್ಲಿ ರಾಹುಲ್ರನ್ನು ರಾಮಭಕ್ತನಂತೆ ಚಿತ್ರಿಸಲಾಗಿದೆ ಎಂಬುದು ಅಚ್ಚರಿಗೆ ಕಾರಣವಾಗಿದೆ. ಬ್ಯಾನರ್ನಲ್ಲಿ ರಾಮಮಂದಿರ ನಿರ್ಮಿಸುವ ನಿಜವಾದ ರಾಮಭಕ್ತ ರಾಹುಲ್ ಗಾಂಧಿ ಅವರಿಗೆ ನಗರಕ್ಕೆ ಸುಸ್ವಾಗತ ಎಂದು ಬರೆಯಲಾಗಿದೆ. ಕೆಲವು ತಿಂಗಳ ಹಿಂದೆ ನಡೆದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತಿಸ್ಗಡ್ ಚುನಾವಣೆ ವೇಳೆ ರಾಹುಲ್ರನ್ನು ಶಿವಭಕ್ತನ ರೂಪದಲ್ಲಿ ಚತ್ರಿಸಲಾಗಿತ್ತು. ಅಷ್ಟೇ ಅಲ್ಲದೆ, ಮಧ್ಯಪ್ರದೇಶ ಸಿಎಂ ಕಮಲ್ನಾಥ್ರನ್ನು ಹನುಮ ಹಾಗೂ ಗೋಮಾತೆಯ ಭಕ್ತ ಎಂದು ಬಣ್ಣಿಸಲಾಗಿದೆ.