ಜಮ್ಮು:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಆಗಸ್ಟ್ 5ರಂದು ರದ್ದಾಗಿದ್ದು, ಇದಾದ ಬಳಿಕ ಭದ್ರತಾ ದೃಷ್ಟಿಯಿಂದ ಕಣಿವೆ ನಾಡಲ್ಲಿ ಸತತ 17ನೇ ದಿನವೂ ಸಮೂಹ ಸಂವಹನ ಸಂಪರ್ಕ ಸ್ಥಗಿತಗೊಂಡಿದೆ.
ಕಣಿವೆನಾಡಲ್ಲಿ17ನೇ ದಿನವೂ ಸಂವಹನ ಸಂಪರ್ಕ ಸ್ಥಗಿತ ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಆಡಳಿತ ಮಂಡಳಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಈ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾನೂನು ಉಲ್ಲಂಘನೆಯಾದಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಶ್ರೀನಗರದಲ್ಲಿ ಕೇಂದ್ರ ಶ್ರೇಣಿಯ ಡಿಐಜಿ ವಿ.ಕೆ. ಬಿರ್ಡಿ, ಕಾಶ್ಮೀರ ಶ್ರೇಣಿಯ ಶಾಲಾ ಶಿಕ್ಷಣ ನಿರ್ದೇಶಕ ಮಹಮ್ಮದ್ ಯೂನಿಸ್ ಮಲ್ಲಿಕ್ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕಿ ಡಾ. ಸೈಯದ್ ಸೆಹ್ರಿಶ್ ಅಸ್ಗರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಜಮ್ಮು ವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಲ್ಲಾ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಅದಾಗ್ಯೂ ಕಾಶ್ಮೀರ ಕಣಿವೆಯಲ್ಲಿ ಕೆಲವು ಸಣ್ಣಪುಟ್ಟ ಗಲಾಟೆಗಳು ನಡೆದಿದ್ದು, ಅವುಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಲಾಗಿದೆ. ಅಲ್ಲದೇ ದೈನಂದಿನ ಅಗತ್ಯಗಳಿಗೆ ಬೇಕಾದಂತಹ ವಸ್ತುಗಳ ಸಂಗ್ರಹ ಬೇಕಾದಷ್ಟಿದೆ. ಹಾಗೆಯೇ ಆಸ್ಪತ್ರೆ ಹಾಗೂ ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಡೆಪ್ಯೂಟಿ ಕಮೀಷನರ್ ಕಚೇರಿಯಲ್ಲಿ ಶೇ.80 ರಿಂದ 90ರಷ್ಟು ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿದ್ದಾರೆ. ಹಾಗೆಯೇ ಇತರ ಕಚೇರಿಗಳಲ್ಲಿಯೂ ಶೇ. 70ರಿಂದ 80 ರಷ್ಟು ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಡಾ. ಸೈಯದ್ ಸೆಹ್ರಿಶ್ ಅಸ್ಗರ್ ತಿಳಿಸಿದರು.
ಬಳಿಕ ಮಾತನಾಡಿದ ಡಿಐಜಿ ವಿ.ಕೆ. ಬಿರ್ಡಿ, ಕೆಲವೆಡೆ ಕಲ್ಲು ತೂರಾಟದಂತಹ ಸಣ್ಣಪುಟ್ಟ ಘಟನೆಗಳು ನಡೆದಿವೆ. ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅದಾಗ್ಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ದೊಡ್ಡ ಘಟನೆಗಳು ನಡೆದಿಲ್ಲ ಎಂದರು.
ಕಾಶ್ಮೀರ ಶ್ರೇಣಿಯ ಶಾಲಾ ಶಿಕ್ಷಣ ನಿರ್ದೇಶಕ ಮಹಮ್ಮದ್ ಯೂನಿಸ್ ಮಲ್ಲಿಕ್ ಮಾತನಾಡಿ, ಕಾಶ್ಮೀರ ವಿಭಾಗದ 10 ಜಿಲ್ಲೆಗಳ 774 ಮಾಧ್ಯಮಿಕ ಶಾಲೆಗಳು ತೆರೆದಿವೆ. ಹಾಗೆಯೇ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಪ್ರಗತಿಯಾಗಿದೆ. ಶೆ. 60ರಿಂದ 70 ರಷ್ಟು ಸಿಬ್ಬಂದಿ ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಶಾಲಾ ಮಕ್ಕಳ ಹಾಜರಾತಿ ನಿಧಾನವಾಗಿ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.