ಕರ್ನಾಟಕ

karnataka

By

Published : May 23, 2019, 6:34 AM IST

ETV Bharat / bharat

ತೆರೆ ಮೇಲಷ್ಟೇ ಅಲ್ಲ, ರಾಜಕೀಯದಲ್ಲೂ ನಟ-ನಟಿಯರ ಮಿಂಚು

ಸಿನಿಮಾ ಸ್ಟಾರ್‌ಗಳ ಭವಿಷ್ಯ ತಿಳಿಯೋದಕ್ಕೆ ಕೆಲವೇ ಗಂಟೆಗಳು ಬಾಕಿಯಿವೆ. ಅದೃಷ್ಟ ಪರೀಕ್ಷೆಗೆ ಈ ಸಾರಿ ಯಾವ್ಯಾವ ನಟ-ನಟಿಯರು ಇಳಿದಿದ್ದಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

ತೆರೆ ಮೇಲಷ್ಟೇ ಅಲ್ಲ, ರಾಜಕೀಯದಲ್ಲೂ ನಟ-ನಟಿಯರ ಮಿಂಚು

ನಾಯಕನಾಗಬೇಕಿದ್ರೇ ಮೊದಲು ಜನರಿಗೆ ಪರಿಚಿತರಾಗಿರಬೇಕು. ಇಷ್ಟಾದ್ರೇ ರಾಜಕೀಯದಲ್ಲಿ ಅರ್ಧಯುದ್ಧ ಗೆದ್ದಂತೆ. ಪೊಲಿಟಿಕ್ಸ್‌ಗೆ ಎಂಟ್ರಿ ಕೊಡಲು ಬಯಸುವ ಸಿನಿಮಾ ತಾರೆಗಳಿಗೆ ವರದಾನವೇ ಅವರ ಪಾಪ್ಯುಲಾರಿಟಿ. ಇದೇ ಪ್ರಭಾವ ಬಳಿಸಿಕೊಂಡೇ ಸಾಕಷ್ಟು ಸಿನಿಮಾ ನಟರುಗಳು ರಾಜಕೀಯದಲ್ಲಿ ಈ ಮೊದಲು ಭವಿಷ್ಯ ಕಂಡುಕೊಂಡಿದ್ದಾರೆ. ಹಾಗೇ ಈ ಸಾರಿಯ ಲೋಕಸಭಾ ಚುನಾವಣೆಯಲ್ಲೂ ಸ್ಟಾರ್‌ ನಟ-ನಟಿಯರು ಅಖಾಡಕ್ಕಿಳಿದಿದ್ದಾರೆ.

ಸಿನಿಮಾ ಸ್ಟಾರ್‌ಗಳ ಭವಿಷ್ಯ ತಿಳಿಯೋದಕ್ಕೆ ಕೆಲವೇ ಗಂಟೆಗಳು ಬಾಕಿಯಿವೆ. ಅದೃಷ್ಟ ಪರೀಕ್ಷೆಗೆ ಈ ಸಾರಿ ಯಾವ್ಯಾವ ನಟ-ನಟಿಯರು ಇಳಿದಿದ್ದಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

ತೆರೆ ಮೇಲಷ್ಟೇ ಅಲ್ಲ, ರಾಜಕೀಯದಲ್ಲೂ ನಟ-ನಟಿಯರ ಮಿಂಚು

ಕಮಲ ಮುಡಿದ ಕನಿಸಿನ ಕನ್ಯೆಗೆ ಸಿಗುತ್ತಾ 2ನೇ ಬಾರಿ ಅದೃಷ್ಟ?

ಎಲ್ಲ ಎಕ್ಸಿಟ್‌ ಪೂಲ್‌ಗಳು ಹೇಮಾ ಮಾಲಿನಿ ಗೆಲ್ಲೋದಿಲ್ಲ ಅಂತಾ ಪ್ರಿಡಿಕ್ಟ್‌ ಮಾಡಿವೆ. ಮಥುರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಗಿಟ್ಟಿಸಿ 2014ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು ಹೇಮಾ ಮಾಲಿನಿ. ಎರಡನೇ ಬಾರಿಗೆ ಅದೇ ಕ್ಷೇತ್ರಿಂದ ಸ್ಪರ್ಧಿಸಿರುವ ಕನಸಿನ ಕನ್ಯೆಗೆ ಮರು ಆಯ್ಕೆ ವಿಶ್ವಾಸವಿದೆ. ಆರ್‌ಎಲ್‌ಡಿಯ ನರೇಂದ್ರ ಸಿಂಗ್‌ ಮತ್ತು ಕಾಂಗ್ರೆಸ್‌ನಿಂದ ಮಹೇಶ್‌ ಪಾಠಕ್‌ ಇವರ ಎದುರಾಳಿಗಳಾಗಿದ್ದಾರೆ.

ಗದ್ದರ್‌ ಹೀರೊ ಸನ್ನಿ ಡಿಯೋಲ್‌ಗೆ ಒಲಿಯುತ್ತಾ ಗುರ್ದಾಸ್‌ಪುರ್‌?

ಸನ್ನಿ ಡಿಯೊಲ್‌ ಇದೇ ಮೊದಲ ಬಾರಿಗೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪಂಜಾಬ್‌ನ ಗುರ್ದಾಸ್‌ಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದು ಸನ್ನಿ ಕಣಕ್ಕಿಳಿದಿದ್ದಾರೆ. ಪಂಜಾಬ್‌ ಕಾಂಗ್ರೆಸ್ ಅಧ್ಯಕ್ಷ ಸುನೀಲ್‌ಕುಮಾರ್ ಜಕ್ಕರ್‌ ಮತ್ತು ಆಪ್‌ನ ಪೀಟರ್‌ ಮಿಸಿಹ್ ಇವರ ಎದುರಾಳಿಗಳು. ತಾರಾ ವರ್ಚಸ್ಸು ಜತೆಗೆ ಮೋದಿ ಅಲೆಯಲ್ಲಿ ಸಂಸತ್‌ ಪ್ರವೇಶಿಸುವ ಉಮೇದು ಸನ್ನಿ ಡಿಯೊಲ್‌ಗಿದೆ.

ಬಹುಭಾಷಾ ನಟಿ ಜಯಪ್ರದಾ ಅರಳುಸುತ್ತಾರೆಯೇ ಕಮಲ?

ಬಹುಭಾಷಾ ತಾರೆ ಜಯಪ್ರದಾ ಈ ಮೊದಲು ಸಮಾಜವಾದಿ ಪಾರ್ಟಿಯಿಂದ ಸಂಸತ್‌ಗೆ ಆಯ್ಕೆಯಾಗಿದ್ದರು. ಆದರೆ, ಈ ಸಾರಿ ಯುಪಿಯ ರಾಮಪುರ ಕ್ಷೇತ್ರದಿಂದ ಬಿಜೆಪಿ ಇವರನ್ನ ಕಣಕ್ಕಿಳಿಸಿದೆ. ಎಸ್‌ಪಿಯ ಆಜಂಖಾನ್‌ ನಟಿ ಮಣಿಗೆ ಭಾರಿ ಪೈಪೋಟಿ ಒಡ್ಡಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ ಮಧ್ಯೆ ನೆಕ್‌ಟು ನೆಕ್‌ ಫೈಟ್‌ ಇದೆ.

ರಂಗೀಲಾ ಬೆಡಗಿ ಉರ್ಮಿಳಾ ರಾಜಕೀಯ ರಂಗು ಸಿಗುತ್ತಾ?

ರಂಗೀಲಾ ಬೆಡಗಿ ಉರ್ಮಿಲಾ ಮಾತೊಂಡ್ಕರ್‌ ಇದೇ ಮೊದಲ ಬಾರಿಗೆ ಆ್ಯಕ್ಟೀವ್ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಉತ್ತರ ಮುಂಬೈ ಕ್ಷೇತ್ರದಿಂದ ಇವರನ್ನ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಬಿಜೆಪಿಯ ಹಾಲಿ ಸಂಸದ ಗೋಪಾಲ್‌ ಶೆಟ್ಟಿಯವರನ್ನ ಮಣಿಸಿ ಸಂಸತ್‌ಗೆ ಪ್ರವೇಶ ಮಾಡುವ ವಿಶ್ವಾಸ ಉರ್ಮಿಳಾರದು. ಎಕ್ಸಿಟ್‌ಪೋಲ್‌ ಮಿಶ್ರ ಫಲಿತಾಂಶ ಬಂದಿದೆ. ಹಾಗಾಗಿ ತೀವ್ರ ಪೈಪೋಟಿಯಂತೂ ಇದೆ.

ಬಿಜೆಪಿಗೆ ಕಾಮೋಷ್‌ ಎಂದ ಶತ್ರುಘ್ನಗೆ ಕೈಹಿಡಿಯುತ್ತಾ ಪಟ್ನಾ ಸಾಹಿಬ್‌?

ಬಿಹಾರದ ಪಟ್ನಾ ಸಾಹಿಬ್‌ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಸಂಸದರಾಗಿದ್ದ ಬಿಟೌನ್‌ ರೆಬಲ್‌ ಸ್ಟಾರ್‌ ಶತ್ರುಘ್ನ ಸಿನ್ಹಾ, ಮೋದಿಯನ್ನೇ ಎದುರು ಹಾಕಿಕೊಂಡು ವಾಗ್ದಾಳಿ ನಡೆಸಿದವರು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದ ಬಿಟೌನ್‌ನ ನಟ ಶತ್ರುಘ್ನ ಸಿನ್ಹಾಗೆ ಬಿಜೆಪಿಯ ರವಿಶಂಕರ್ ಪ್ರಸಾದ್‌ ಪ್ರಬಲ ಎದುರಾಳಿ. ಎಕ್ಸಿಟ್‌ ಪೋಲ್‌ ಮಾತ್ರ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗೆಲ್ತಾರೆ ಅಂತಾ ಹೇಳಿವೆ.

ಈ ಸಾರಿಯಾದರೂ ಗೆದ್ದು ಮುಖ ಉಳಿಸಿಕೊಳ್ತಾರೆ ರಾಜ್‌ ಬಬ್ಬರ್‌?

ಯುಪಿಯ ಫತೇಪುರ್‌ ಸಿಕ್ರೀ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಟೌನ್‌ ನಟ ರಾಜ ಬಬ್ಬರ್‌, ಕಳೆದ ಬಾರಿ ಸೋತಿದ್ದರು. ಸಂಸತ್‌ ಸದಸ್ಯರಾಗಿಯೂ ಈ ಹಿಂದೆ ಕೆಲಸ ಮಾಡಿದ್ದಾರೆ ಬಬ್ಬರ್. ಯುಪಿ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ರಾಜ್‌ ಬಬ್ಬರ್‌ಗೆ ಗೆಲುವು ಕಷ್ಟ ಅಂತಾ ಹೇಳಲಾಗುತ್ತಿದೆ. ಬಿಜೆಪಿಯ ರಾಜಕುಮಾರ್‌ ಚಾಹರ್‌ ತೀವ್ರ ಪೈಪೋಟಿ ಒಡ್ಡಿದ್ದಾರೆ ಅಂತಾ ಹೇಳುತ್ತಿವೆ ಎಕ್ಸಿಟ್‌ಪೋಲ್‌ಗಳು.

ಜಸ್ಟ್‌ ಆಸ್ಕಿಂಗ್ ಅಂತಾ ಕೇಳುವ ಪ್ರಕಾಶ್‌ ರಾಜ್‌ ಜನಪ್ರತಿನಿಧಿಯಾಗುವರೇ ?

ಜಸ್ಟ್‌ ಆಸ್ಕಿಂಗ್ ಅನ್ನೋ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನ ಕಟುವಾಗಿ ಟೀಕಿಸುತ್ತಿದ್ದ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್‌ ರಾಜ್‌ ಈಗ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಬೆಂಗಳೂರು ಕೇಂದ್ರ ಸಂಸತ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಕಾಶ್‌ ಗೆಲ್ಲೋದು ಅಷ್ಟು ಸುಲಭ ಅಲ್ಲ ಅಂತಾ ಅವರಿಗೂ ಗೊತ್ತಿದೆ. ನಿರಂತರ ವಿಪಕ್ಷವಾಗಿರಬೇಕು ಅಂತಾರೆ ಪ್ರಕಾಶ್‌ ರಾಜ್‌. ಆದರೆ, ಅವರಿಗೆ ಎದುರಾಳಿಯಾಗಿರೋದು ಬಿಜೆಪಿಯ ಹಾಲಿ ಸಂಸದ ಪಿ.ಸಿ ಮೋಹನ್ ಮತ್ತು ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್‌. ಒಂದು ವೇಳೆ ಪ್ರಕಾಶ್‌ ಗೆಲುವು ಕಂಡ್ರೇ ನಿಜಕ್ಕೂ ಅದು ಇತಿಹಾಸವೇ ಸರಿ.

ಕಿರಣ್‌ ಖೇರ್‌ ಮತ್ತೆ ಸಂಸತ್‌ ಪ್ರವೇಶ ಮಾಡ್ತಾರೆಯೇ ?

ಬಿಟೌನ್‌ ನಟಿ ಕಿರಣ್ ಖೇರ್‌ ಈಗಾಗಲೇ ಒಂದು ಅವಧಿಗೆ ಬಿಜೆಪಿ ಸಂಸದೆಯಾಗಿದ್ದವರು. 2ನೇ ಬಾರಿಗೆ ಪಂಜಾಬ್‌ನ ಚಂಡೀಗಢ್‌ ಕ್ಷೇತ್ರದಿಂ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಪವನ್‌ಕುಮಾರ್‌ ಬನ್ಸಾಲ್‌ ಇವರಿಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ. ಮೊದಲು ಕಿರಣ್‌ ಸೋಲ್ತಾರೆ ಅಂತಾ ಹೇಳಲಾಗುತ್ತಿತ್ತು. ಆದರೆ, ಆಪ್‌ ಕೂಡ ಇಲ್ಲಿ ಸ್ಪರ್ಧಿಸಿರೋದ್ರಿಂದಾಗಿ ಮತಗಳ ವಿಭಜನೆಯಾಗಿ ಗೆಲುವು ಮತ್ತೆ ಕಿರಣ್‌ ಪಾಲಾಗಲಿದೆ ಅಂತಾ ಎಕ್ಸಿಟ್‌ಪೋಲ್‌ ಸಮೀಕ್ಷೆಗಳು ಹೇಳುತ್ತಿವೆ.

ಪವರ್‌ ಸ್ಟಾರ್‌ ಪೊಲಿಟಿಕ್ಸ್‌ನಲ್ಲೂ ತಮ್ಮ ಪವರ್‌ ತೋರಿಸುವರೇ ?

ಟಿಟೌನ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್ ಈ ಮೊದಲು ಜನಸೇನಾ ಪಕ್ಷ ಕಟ್ಟಿದ್ದರೂ ಚುನಾವಣಾ ರಾಜಕೀಯಕ್ಕೆ ಧುಮುಕಿರೋದು ಇದೇ ಮೊದಲು. ಆಂಧ್ರದ ಗಜುವಾಕಾ ಮತ್ತು ಭೀಮಾವರಂ ಈ ಎರಡೂ ಕ್ಷೇತ್ರಗಳಲ್ಲಿ ಏಕ ಕಾಲಕ್ಕೆ ಸ್ಪರ್ಧಿಸಿರುವ ಪವನ್‌ ಕಲ್ಯಾಣ್‌ ಟೀ ಕಪ್‌ನ ಎಷ್ಟು ಜನ ಎತ್ತಿ ಹಿಡಿದಿದ್ದಾರೋ ಗೊತ್ತಿಲ್ಲ. ಎಕ್ಸಿಟ್‌ಪೋಲ್‌ಗಳು ಮಾತ್ರ ಟಿಡಿಪಿ ಇಬ್ಬರೂ ಅಭ್ಯರ್ಥಿಗಳನ್ನೂ ಎರಡೂ ಕ್ಷೇತ್ರಗಳಲ್ಲಿ ಸೋಲಿಸ್ತಾರೆ ಅಂತಾ ಹೇಳಿವೆ. ಒಂದು ವೇಳೆ ನಟ ಪವನ್‌ ಕಲ್ಯಾಣ್‌ ಗೆದ್ರೇ ಇದೇ ಮೊದಲ ಬಾರಿಗೆ ಅವರು ವಿಧಾನಸಭೆಗೆ ಎಂಟ್ರಿ ಕೊಡಲಿದ್ದಾರೆ. ಜನಸೇನಾ ಪಕ್ಷದ ಜತೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮೈತ್ರಿ ಮಾಡಿಕೊಂಡಿರುವುದು ವಿಶೇಷ.

ನಟ ಬಾಲಯ್ಯ ಮತ್ತೆ ಟಿಡಿಪಿಯಿಂದ ಆಯ್ಕೆಯಾಗ್ತಾರೆಯೇ ?

ಟಿಟೌನ್‌ನ ನಂದಮೂರಿ ಬಾಲಕೃಷ್ಣ ಸಿನಿಮಾ ಹಾಗೂ ರಾಜಕೀಯ ಎರಡೂ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ತಂದೆ ಎನ್‌ಟಿಆರ್‌ ಟಿಡಿಪಿ ಸಂಸ್ಥಾಪಿಸಿ ಮುಖ್ಯಮಂತ್ರಿಯಾಗಿದ್ದವರು. ನಟನೆಯ ಜತೆಗೆ ಟಿಡಿಪಿ ಪರ ಪ್ರಚಾರಕ್ಕೆ ತೆರಳುತ್ತಿದ್ದ ಬಾಲಯ್ಯ 2014ರಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷಿಗಿಳಿದು ಅದರಲ್ಲೂ ಯಶಸ್ವಿಯಾಗಿದ್ದರು. ಟಿಡಿಪಿಯಿಂದ ಹಿಂದೂಪುರ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. ಈ ಸಾರಿ ಮತ್ತೆ ಅದೇ ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.

ಬೋಜ್‌ಪುರಿ ನಟ ಮನೋಜ್‌ ತಿವಾರಿ ದೆಹಲಿಯ ಬಿಜೆಪಿ ಅಧ್ಯಕ್ಷ. ಈ ಸಾರಿ ದೆಹಲಿಯ ಈಶಾನ್ಯ ಕ್ಷೇತ್ರದಿಂದ ಬಿಜೆಪಿ ಇವರನ್ನ ಅಖಾಡಕ್ಕಿಳಿಸಿದೆ. 3 ಸಾರಿ ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಇವರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ. 2ನೇ ಬಾರಿ ಇದೇ ಕ್ಷೇತ್ರದಿಂದ ಮನೋಜ್ ತಿವಾರಿ ಸಂಸತ್‌ ಪ್ರವೇಶಿಸುತ್ತಾರೆ ಅಂತಾ ಎಕ್ಸಿಟ್‌ ಪೋಲ್‌ ಹೇಳ್ತಿವೆ. ಹೆಚ್ಚು ಅಂತರದಿಂದ ಶೀಲಾ ದೀಕ್ಷಿತ್‌ರನ್ನ ಸೋಲಿಸ್ತಾರೆ ಅಂತಾ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಬೋಜ್‌ಪುರಿ ಮತ್ತು ಬಿಟೌನ್‌ ನಟ ರವಿ ಕಿಶನ್ ಯುಪಿಯ ಗೋರಖ್‌ಪುರ ಬಿಜೆಪಿ ಅಭ್ಯರ್ಥಿ. ಎಸ್‌ಪಿ-ಬಿಎಸ್‌ಪಿಯ ರಾಮ್‌ ಭುವಾಲ್‌ ರವಿ ಕಿಶನ್‌ಗೆ ಕಠಿಣ ಸ್ಪರ್ಧೆಯೊಡ್ಡಿದ್ದಾರೆ. ಇದೇ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ನಾಲ್ಕು ಬಾರಿ ಸಂಸದರಾಗಿದ್ದರು. ಆದರೆ, ಸಿಎಂ ಆದ ಬಳಿಕ ನಡೆದ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಇಲ್ಲಿ ಸೋಲೊಪ್ಪಿಕೊಂಡಿತ್ತು. ಈಗ ಮತ್ತೆ ಕಡಿಮೆ ಅಂತರದಲ್ಲಾದರೂ ಗೆಲುವು ಕಾಣ್ತಾರೆ ಅಂತಿವೆ ಮತಗಟ್ಟೆ ಸಮೀಕ್ಷೆಗಳು.

ಬೋಜ್‌ಪುರಿ ನಟ ದಿನೇಶ್‌ ಯಾದವ್‌ ಯುಪಿಯ ಅಜಮ್‌ಗಢ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ವಿಶೇಷ ಅಂದ್ರೇ ಈ ಕ್ಷೇತ್ರದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸ್ಪರ್ಧಿಸಿದ್ದಾರೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಸಪೋರ್ಟ್‌ನಿಂದಾಗಿ ಮಾಜಿ ಸಿಎಂ ಅಖಿಲೇಶ್‌ ಸುಲಭವಾಗಿ ಗೆಲ್ತಾರೆ ಅಂತಾ ಎಕ್ಸಿಟ್‌ಪೋಲ್‌ಗಳು ಭವಿಷ್ಯ ನುಡಿದಿವೆ. ದಿನೇಶ್ ಯಾದವ್‌ ಪೊಲಿಟಿಕಲ್‌ ಜರ್ನಿ ಫ್ಲಾಪ್‌ ಶೋ ಆಗುತ್ತೆ ಅಂತಾ ಹೇಳಲಾಗುತ್ತಿದೆ.

ಪಂಜಾಬ್‌ ಗಾಯಕ ಹನ್ಸ್‌ ರಾಜ್‌ ಹನ್ಸ್‌ ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಬಿಜೆಪಿ ಟಿಕೆಟ್‌ ಪಡೆದು ದೆಹಲಿಯ ವಾಯವ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ ಹನ್ಸ್‌ರಾಜ್‌. ಆಪ್‌ನ ಗುಗನ್‌ಸಿಂಗ್‌ ರಂಗಾ ಮತ್ತು ಕಾಂಗ್ರೆಸ್‌ನ ರಾಜೇಶ್‌ ಲಿಲೊತಿಯಾ ತೀವ್ರ ಪೈಪೋಟಿ ಒಡ್ಡಿದ್ದಾರೆ. ಆದರೆ, ಕಡಿಮೆ ಅಂತರದಲ್ಲಿ ಬಿಜೆಪಿಯ ಹನ್ಸ್‌ರಾಜ್‌ ಗೆಲುವು ಕಾಣ್ತಾರೆ ಅಂತಾ ಹೇಳಲಾಗುತ್ತಿದೆ.

ಬಹುಭಾಷಾ ತಾರೆ ಮೂನ್ ಮೂನ್ ಸೇನ್ ಪಶ್ಚಿಮ ಬಂಗಾಳದ ಬಂಕುರಾ ಕ್ಷೇತ್ರದ ಟಿಎಂಸಿಯ ಹಾಲಿ ಸಂಸದೆ. ಆದರೆ, ಕ್ಷೇತ್ರ ಬದಲಿಸಿ ಅಸನಾಲ್‌ ಸಂಸತ್‌ ಕ್ಷೇತ್ರದಿಂದ ಸ್ಫರ್ಧಿಸಿದ್ದಾರೆ. ಇದೇ ಕ್ಷೇತ್ರದ ಹಾಲಿ ಸಂಸದ, ನಟ, ಹಿನ್ನೆಲೆ ಗಾಯಕ ಹಾಗೂ ಕೇಂದ್ರ ಸಚಿವ ಬಬೂಲ್ ಸುಪ್ರೀಯೋ ಅವರಿಗೆ ಮೂನ್‌ ಮೂನ್‌ ಸೇನ್‌ ತೀವ್ರ ಪೈಪೋಟಿ ನೀಡಿದ್ದಾರೆ. ಇಬ್ಬರ ನಡುವೆ ನೆಕ್‌ಟು ನೆಟ್‌ ಫೈಟ್‌ ಇದೆ ಅಂತಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಮೂನ್‌ ಮೂನ್‌ ಸೇನ್ ಈ ಕ್ಷೇತ್ರದಿಂದ ಗೆಲ್ಲುವ ಅಚಲ ವಿಶ್ವಾಸ ಹೊಂದಿದ್ದಾರೆ.

ಬಂಗಾಳದ ಘಟ್ಕಲ್ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ದೀಪಕ್ ಅಧಿಕಾರಿ ದೇವ್‌ ಬಂಗಾಳಿ ನಟ. ಸಿಪಿಐನ ತಪನ್‌ ಕುಮಾರ್‌ ಗಂಗೂಲಿ ಇವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಆದರೆ, 2ನೇ ಬಾರಿಗೆ ಇದೇ ಕ್ಷೇತ್ರದಿಂದ ದೀಪಕ್ ಅಧಿಕಾರಿ ದೇವ್‌ ಆಯ್ಕೆಯಾಗ್ತಾರೆ ಅಂತಾ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಬಂಗಾಳಿ ಸಿನಿಮಾ ನಟಿ ಮಿಮಿ ಚಕ್ರವರ್ತಿ ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿಯವರನ್ನೇ ಅನುಕರಿಸುತ್ತಾರೆ. ಜಾಧವಪುರದಿಂದ ಕ್ಷೇತ್ರದಿಂದ 29ನೇ ವಯಸ್ಸಿಗೆ ಸಂಸದೆಯಾಗಿದ್ದ ಮಿಮಿ ಈ ಸಾರಿ ಮತ್ತೆ ಅದೇ ಕ್ಷೇತ್ರದಿಂದಲೇ ಮರು ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. ಸಿಪಿಐಎಂನ ಬಿಕಾಶ್‌ ರಂಜನ್‌ ಭಟ್ಟಾಚಾರ್ಯ ವಿರುದ್ಧ ಮತ್ತೆ ಗೆಲುವು ಸಾಧಿಸ್ತಾರೆ ಅಂತಾ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಬಂಗಾಳಿ ಸಿನಿಮಾ ನಟಿ ನುಶ್ರತ್‌ ಜಹಾನ್ ಟಿಎಂಸಿ ಟಿಕೆಟ್‌ ಪಡೆದು ಪಶ್ಚಿಮ ಬಂಗಾಳದ ಬಸಿರಾಹಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸಿಪಿಐನ ಪಲ್ಲಭಸೇನ್‌ ಗುಪ್ತಾ ಇವರಿಗೆ ಪೈಪೋಟಿ ಒಡ್ಡಿದ್ದಾರೆ. ಆದರೆ, 29 ವರ್ಷದ ನುಶ್ರತ್‌ ಜಹಾನ್‌ ಮೊದಲ ಬಾರಿಗೆ ಸಂಸತ್‌ ಸದಸ್ಯರಾಗಿ ಆಯ್ಕೆಯಾಗ್ತಾರೆ ಅಂತಾ ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿವೆ.

ಬಹುಭಾಷಾ ತಾರೆ ಸುಮಲತಾ ಅಂಬರೀಷ್‌ ಇದೇ ಮೊದಲ ಬಾರಿಗೆ ಮಂಡ್ಯ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪತಿಯ ಸಾವಿನ ಬಳಿಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಸುಮಲತಾ ಅಂಬಿಗೆ ಮುಖ್ಯಮಂತ್ರಿ ಪುತ್ರ ನಿಖಿಲ್‌ಕುಮಾರ್‌ ಸ್ವಾಮಿಗೆ ತೀವ್ರ ಪೈಪೋಟಿಯನ್ನ ಒಡ್ಡಿದ್ದಾರೆ. ಗುಪ್ತಚರ ವರದಿ ಮತ್ತು ಎಕ್ಸಿಟ್‌ಪೋಲ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ತಾರೆ ಅಂತಾ ಭವಿಷ್ಯ ಹೇಳಿವೆ. ನಿಖಿಲ್‌ ಕುಟುಂಬ ರಾಜಕೀಯ ಹಿನ್ನೆಲೆಯಿದ್ದರೂ ಚಿತ್ರರಂಗದಿಂದಲೂ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ ಎರಡು ಸಿನಿಮಾಗಳಲ್ಲಿ ನಟಿಸಿರುವ ನಿಖಿಲ್‌ಕುಮಾರ್ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಿಂದ ಇಬ್ಬರು ಸ್ಟಾರ್‌ ನಟರುಗಳು ಸಂಸತ್‌ ಪ್ರವೇಶಿಸಿದ ಇತಿಹಾಸವಿದೆ. ಸ್ಯಾಂಡಲ್‌ವುಡ್‌ನ ರೆಬೆಲ್‌ ಸ್ಟಾರ್‌ ಅಂಬರೀಷ್‌ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ದರು. ಹಾಗೇ ಜನತಾದಳದ ಟಿಕೆಟ್‌ ಪಡೆದು ನಟ ಶಶಿಕುಮಾರ ಚಿತ್ರದುರ್ಗದ ಸಂಸದರಾಗಿದ್ದರು. ಶಶಿಕುಮಾರ್‌ ಒಂದೇ ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದರು. ಆದರೆ, ಅಂಬಿ ಮಂಡ್ಯ ಕ್ಷೇತ್ರದಿಂದ 12, 13 ಹಾಗೂ 14ನೇ ಲೋಕಸಭೆಗೆ ಆಯ್ಕೆಯಾಗಿದ್ದರು.

ಸಿನಿಮಾ ನಟರುಗಳು ಇದರಲ್ಲಿ ಎಷ್ಟು ಮಂದಿ ಕ್ಲಿಕ್ ಆಗ್ತಾರೆ ಇನ್ನೆಷ್ಟು ಸ್ಟಾರ್‌ಗಳು ಫ್ಲಾಪ್ ಆಗ್ತಾರೆ ಅನ್ನೋದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

For All Latest Updates

TAGGED:

ABOUT THE AUTHOR

...view details