ಬೀಜಿಂಗ್(ಚೀನಾ): ಕೊರೊನಾದಿಂದ ಚೇತರಿಕೆ ಕಾಣುತ್ತಿರುವ ಬೆನ್ನೆಲ್ಲೇ ಚೀನಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಸಜ್ಜಾಗಿದೆ. ಚೀನಾದಲ್ಲೇ ಪ್ರಮುಖ ಆಹಾರವಾಗಿದ್ದ ನಾಯಿ ಮಾಂಸ ಸೇವನೆಯನ್ನು ಕೊನೆಗೊಳಿಸಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಕಾನೂನು ಜಾರಿಗೊಳಿಸಲು ಸಿದ್ಧವಾಗಿದ್ದು, ಶ್ವಾನ ಮಾಂಸವನ್ನು ನಿಷೇಧಿತ ಮಾಂಸಗಳ ಪಟ್ಟಿಗೆ ಸೇರಿಸಲು ಗ್ರೀನ್ ಸಿಗ್ನಲ್ ದೊರೆತಿದೆ.
ಪ್ರಾಣಿಗಳಿಂದ ಮಾನವರಿಗೆ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚೀನಾದ ಕೃಷಿ ಹಾಗೂ ಗ್ರಾಮೀಣ ವ್ಯವಹಾರಗಳ ಇಲಾಖೆ ನಾಯಿಗಳನ್ನು ಮಾನವನ ಒಡನಾಡಿ ಎಂದು ಕರೆದಿದ್ದು, ಇಲಾಖೆಯ ನಿರ್ಧಾರದಿಂದ ಇನ್ಮುಂದೆ ನಾಯಿಗಳು ವೈಟ್ ಲಿಸ್ಟ್ನಿಂದ ಪ್ರತ್ಯೇಕಿಸಲ್ಪಟ್ಟು, ಮಾಂಸಕ್ಕಾಗಿ ಬಳಕೆಯಾಗೋದು ತಪ್ಪುತ್ತದೆ.
ಇತ್ತೀಚೆಗಷ್ಟೆ ಶೆನ್ಜಾನ್ ನಗರ ಮೊಟ್ಟ ಮೊದಲ ಬಾರಿಗೆ ನಾಯಿ ಮತ್ತು ಬೆಕ್ಕುಗಳ ಮಾಂಸವನ್ನು ರದ್ದು ಮಾಡಿದೆ. ಜಗತ್ತಿನಾದ್ಯಂತ ಪ್ರಾಣಿ ದಯಾ ಸಂಘಗಳು ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ. ಹೊಸ ಕಾನೂನು ಚೀನಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದು ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್(ಹೆಚ್ಎಸ್ಐ)ನ ವೆಂಡಿ ಹಿಗ್ಗಿನ್ಸ್ ಅಭಿಪ್ರಾಯ ಪಟ್ಟಿದ್ದಾರೆ ಜೊತೆಗೆ ಮಾಂಸ ವ್ಯವಹಾರದ ಮೇಲೆ ಸ್ವಲ್ಪ ಮಟ್ಟಿಗಿನ ಪ್ರಭಾವ ಬೀರಲಿದೆ ಎಂದು ತಿಳಿಸಿದ್ದಾರೆ.
ಈವರೆಗಿನ ವರ್ಷಕ್ಕೆ ಸುಮಾರು 10 ರಿಂದ 12 ಲಕ್ಷ ನಾಯಿಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿತ್ತು ಎಂದು ಹೆಚ್ಎಸ್ಐ ಅಂದಾಜು ಮಾಡಿದೆ. ಸುಮಾರು 4 ಲಕ್ಷ ಬೆಕ್ಕುಗಳು ವರ್ಷಕ್ಕೆ ಬಲಿಯಾಗುತ್ತಿವೆ ಎಂದು ಅನಿಮಲ್ ಏಷಿಯಾ ಸಂಸ್ಥೆ ತಿಳಿಸಿದೆ.
ಈಗ ನಾಯಿಗಳ ಮಾಂಸ ನಿಷೇಧ ಮಾಡುವುದರಿಂದ ರೇಬಿಸ್, ಕಾಲರಾ ರೋಗಳನ್ನು ಕೂಡಾ ತಡೆಯಬಹುದಾಗಿದೆ ಅನ್ನೋದು ಮತ್ತೊಂದು ಲೆಕ್ಕಾಚಾರ. ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ವನ್ಯಮೃಗಗಳ ಮಾರಾಟವನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿತ್ತು. ಮಾಂಸದ ಮಾರುಕಟ್ಟೆಗಳು ಬಹುತೇಕ ಮುಚ್ಚಿದ್ದವು. ಈಗ ನಾಯಿ ಮಾಂಸದ ಮೇಲೆ ನಿಷೇಧ ಹೇರಲು ಗ್ರೀನ್ ಸಿಗ್ನಲ್ ದೊರೆತಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಪ್ರಾಣಿಗಳ ಮಾಂಸ ನಿಷೇಧವಾಗುವ ಸಾಧ್ಯತೆಯಿದೆ.