ನವದೆಹಲಿ: ಭಾರತದ ಜೊತೆಗೆ ಜಗಳಕ್ಕಿಳಿದಿರುವ ಚೀನಾದ ಭೂ ದಾಹ ಕಡಿಮೆಯಾದಂತಿಲ್ಲ. ಭಾರತಕ್ಕೆ ರಾಜತಾಂತ್ರಿಕವಾಗಿ ಪೆಟ್ಟು ಕೊಡುವ ಮೂಲಕ, ಹಿಮಾಲಯನ್ ಕಣಿವೆ ಪ್ರದೇಶದಲ್ಲಿ ಏಕಾಂಗಿಯಾಗಿ ಮಾಡಲು ಯತ್ನಿಸಿದೆ.
ಈ ಪ್ರಯತ್ನದ ಭಾಗವಾಗಿ ಇದೀಗ ಭೂತಾನ್‍ನ ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯದ ಮೇಲೆ ತನ್ನ ಹತೋಟಿ ಸಾಧಿಸಲು ಮುಂದಾಗಿದೆ. ಈ ಅಭಯಾರಣ್ಯ, ಈಶಾನ್ಯ ಭಾರತದ ಅರುಣಾಚಲದ ಪಕ್ಕದಲ್ಲಿದೆ. ಭೂತಾನ್‍ನ ಜೊತೆಗೆ ರಾಜತಾಂತ್ರಿಕ ಸಂಬಂಧ ಬಲವರ್ಧನೆ ಮೂಲಕ ಭಾರತ-ಭೂತಾನ್ ನಡುವಣ ಸಂಬಂಧ ಪರೀಕ್ಷೆಗೆ ಅದು ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ, ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್, ದಕ್ಷಿಣ ಏಷ್ಯಾದ ಅತಿ ಸಣ್ಣ ರಾಷ್ಟ್ರಗಳಲ್ಲೊಂದಾಗಿರುವ ಭೂತಾನ್ ಜೊತೆಗಿನ ಗಡಿ ಬಿಕ್ಕಟ್ಟು ಪರಿಹರಿಸಲು, ಒಂದು ಪ್ಯಾಕೇಜ್ ಘೋಷಿಸಲು ನಿರ್ಧರಿದೆ ಎಂದು ತಿಳಿಸಿದರು. "ಚೀನಾದ ನಿಲುವು ಸ್ಪಷ್ಟವಾಗಿದೆ ಹಾಗೂ ಅದು ಒಂದೇ ತರನಾಗಿದೆ. ಚೀನಾ ಹಾಗೂ ಭೂತಾನ್ ನಡುವಣ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಮಧ್ಯ, ಪೂರ್ವ, ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಗಡಿ ವಿವಾದ ಇನ್ನೂ ಜೀವಂತವಾಗಿದೆ," ಎಂದು ಅವರು ತಿಳಿಸಿದರು ಎಂದು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
"ಈ ಎಲ್ಲಾ ವಿವಾದಗಳಿಗೆ ಪರಿಹಾರ ಎನ್ನುವಂತೆ, ಈಗ ಚೀನಾ ಒಂದು ಪ್ಯಾಕೇಜ್ ಘೋಷಿಸಲು ನಿರ್ಧರಿಸಿದೆ. ಇಂತಹ ವಿವಾದಗಳನ್ನು ದೊಡ್ಡದಾಗಿಸಲು ಚೀನಾಗೆ ಇಷ್ಟವಿಲ್ಲ. ಈ ವಿವಾದಕ್ಕೆ ಸಂಬಂಧಿಸಿ, ಭೂತಾನ್ ಜೊತೆಗೆ ಚೀನಾ ನಿರಂತರವಾಗಿ ಚರ್ಚಿಸುತ್ತಿದೆ. ಇದನ್ನು ಉಭಯ ದೇಶಗಳು ಶಾಂತಿಯುತವಾಗಿ ಬಗೆಹರಿಸಲು ನಿರ್ಧರಿಸಿವೆ," ಎಂದು ಅವರು ತಿಳಿಸಿದರು.
ವಾಂಗ್ ಹೇಳಿಕೆ ಮಹತ್ವ ಪಡೆಯಲು ಹಲವು ಕಾರಣಗಳಿವೆ. ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯವನ್ನು ಅಭಿವೃದ್ಧಿಪಡಿಸಲು, ವಿಶ್ವ ಪರಿಸರ ಫೆಸಿಲಿಟಿ ಫಂಡ್ (ಜಿಇಎಫ್) ನೆರವು ನೀಡಲು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಜಿಇಎಫ್ 183 ದೇಶಗಳನ್ನು ಒಳಗೊಂಡ ಒಂದು ವ್ಯವಸ್ಥೆಯಾಗಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು, ನಾಗರಿಕ ಸಮಾಜ, ಖಾಸಗಿ ಕಂಪನಿಗಳು ಪಾಲ್ಗೊಳ್ಳುವಿಕೆಯ ಮೂಲಕ, ವಿಶ್ವದ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಒಂದು ವ್ಯವಸ್ಥೆಯಾಗಿದೆ. ಇದು ರಾಷ್ಟ್ರಗಳಿಗೆ ಹಣಕಾಸು ನೆರವು ನೀಡುವ ಮೂಲಕ, ಪರಿಸರ ರಕ್ಷಣೆಗೆ ಯತ್ನಿಸುತ್ತದೆ.
ಆದರೆ, ವಿಶ್ಲೇಷಕರನ್ನು ದಂಗುಬಡಿಸಿದ ಅಂಶವೆಂದರೆ, ಈ ಸಂಬಂಧ ಚೀನಾ ವ್ಯಕ್ತಪಡಿಸಿದ ಆಕ್ಷೇಪ. ಏಕೆಂದರೆ, ಇದು ಚೀನಾ ಭಾಗವಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ, ಇದು ಭಾರತ-ಭೂತಾನ್ ಗಡಿ ಭಾಗದಲ್ಲಿರುವ ಅಭಯಾರಣ್ಯವಾಗಿದೆ. ಇದು ಯಾವುದೇ ಕಾರಣಕ್ಕೂ ವಿವಾದಾಸ್ಪದವಾಗಿಲ್ಲ.
ಈ ಆಕ್ಷೇಪ ಭಾರತ-ಚೀನಾ, ಲಡಾಖ್ ಪ್ರದೇಶದಲ್ಲಿ ನಡೆದ ರಕ್ತಸಿಕ್ತ ಹೊಡೆದಾಟದ ಬಳಿಕ ಶಾಂತಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಕೇಳಿ ಬಂದಿದೆ. ಕಳೆದ ತಿಂಗಳ ಈ ರಕ್ತಸಿಕ್ತ ಹೊಡೆದಾಟದಲ್ಲಿ ಉಭಯ ಸೇನೆಗಳೂ ಜೀವ ಹಾನಿ ಅನುಭವಿಸಿದ್ದವು. 45 ವರ್ಷಗಳ ಬಳಿಕ ಏಷ್ಯಾದ ಈ ಎರಡು ದೈತ್ಯ ಶಕ್ತಿಗಳ ನಡುವೆ ಈ ರಕ್ತಸಿಕ್ತ ಕಾದಾಟ ಸಂಭವಿಸಿತ್ತು. ಇದು ನಡೆದದ್ದು 3,488 ಕಿಲೋಮೀಟರ್ ವ್ಯಾಪ್ತಿಯ ಗಡಿನಿಯಂತ್ರಣ ರೇಖೆ ಬಳಿ.
ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯ, ಭೂತಾನ್‍ನ ಪೂರ್ವ ಭಾಗದ ಗಡಿಯಲ್ಲಿದ್ದು, ಈ ಭಾಗ ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಅರುಣಾಚಲ ಪ್ರದೇಶದ ಮೇಲೆ ಚೀನಾ ತನ್ನ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಅದನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತಿದೆ.
ಭೂತಾನ್ ಹಾಗೂ ಚೀನಾ ನಡುವೆ ಯಾವುದೇ ಅಧಿಕೃತ ರಾಜತಾಂತ್ರಿಕ ಸಂಬಂಧವಿಲ್ಲ. 1951ರಲ್ಲಿ ಟಿಬೆಟ್ ಆಕ್ರಮಣ ಬಳಿಕ, ಭೂತಾನ್ ಹಾಗೂ ಚೀನಾ ನೆರೆಹೊರೆ ದೇಶಗಳಾದವು. 1984ರಿಂದೀಚೆಗೆ, ಎರಡೂ ದೇಶಗಳು 24 ಸುತ್ತಿನ ಮಾತುಕತೆಯನ್ನು ಗಡಿ ವಿವಾದ ಬಗೆಹರಿಸಲು ನಡೆಸಿವೆ. ಆದರೆ ಅವು ಫಲಪ್ರದವಾಗಿಲ್ಲ.