ಬೀಜಿಂಗ್(ಚೀನಾ) :ಗಾಲ್ವಾನ್ ಕಣಿವೆಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಲು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ.
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲೈಜಿನ್ ಮಾತನಾಡಿ, ಚೀನಾದ ಸೇನೆ ಪೂರ್ವ ಲಡಾಖ್ ಗಡಿ ಭಾಗದ ಎಲ್ಲಾ ಟೆಂಟ್ಗಳನ್ನ ತೆರವುಗೊಳಿಸಿದೆ. ಗಾಲ್ವಾನ್ ಕಣಿವೆಯ ಕೆಲವೊಂದು ಪ್ರದೇಶಗಳಿಂದ ಸೇನೆ ಹಿಂದಕ್ಕೆ ಸರಿದಿದೆ. ಇದು ಗಡಿಯಲ್ಲಿ ಶಾಂತಿ ಸೂಚನೆಯ ಮೊದಲ ಹೆಜ್ಜೆಯೆಂದು ಸ್ಪಷ್ಟಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಗಾಲ್ವಾನ್ ಸಂಘರ್ಷ ನಡೆದ ನಂತರ ಇದೇ ಮೊದಲ ಬಾರಿಗೆ ಶಾಂತ ವಾತಾವರಣದ ಸೂಚನೆ ಸಿಕ್ಕಿದೆ. ಚೀನಾ ಸೇನೆ 14 ಪ್ಯಾಟ್ರೋಲಿಂಗ್ ಪಾಯಿಂಟ್ನಲ್ಲಿರುವ ಟೆಂಟ್ಗಳನ್ನು ತೆರವು ಮಾಡಿದೆ. ಗಾಲ್ವಾನ್ ಹಾಗೂ ಗೋಗ್ರಾಗಳಲ್ಲೂಮ ಕೂಡಾ ವಾಹನ ಸಂಚಾರ ಕಡಿಮೆಯಾಗಿದೆ ಎಂದು ಸೇನಾ ಮೂಲಗಳು ಸ್ಪಷ್ಟನೆ ನೀಡಿವೆ.
ಜೂನ್ 30ರಂದು ಕಮಾಂಡರ್ ಹಂತದಲ್ಲಿ ಮಾತುಕತೆಗಳು ನಡೆದಿದ್ದವು. ಇದಕ್ಕೂ ಮೊದಲು ಎರಡು ಹಂತದಲ್ಲಿ ಮಾತುಕತೆಗಳು ನಡೆದಿದ್ದು ಅಷ್ಟೇನೂ ಫಲಪ್ರದವಾಗಿರಲಿಲ್ಲ. ಈಗ ಚೀನಾ ಸೇನೆ ಹಿಂದಕ್ಕೆ ಸರಿದಿದ್ದು, ಭಾರತವೂ ಕೂಡಾ ಉತ್ತಮ ಪ್ರತಿಕ್ರಿಯೆ ನೀಡಲಿದೆ ಎಂದು ಝಾವೋ ಭರವಸೆ ವ್ಯಕ್ತಪಡಿಸಿದ್ದಾರೆ.
ನವದೆಹಲಿಯ ಮೂಲಗಳ ಪ್ರಕಾರ ಎರಡೂ ರಾಷ್ಟ್ರಗಳ ನಡುವೆ ಒಪ್ಪಂದ ನಡೆದಿದ್ದು, ಈ ಒಪ್ಪಂದದ ಅನ್ವಯದಂತೆ ಚೀನಾ ತನ್ನ ಸೇನೆಯನ್ನು ಹಿಂದೆಗೆದುಕೊಂಡಿದೆ ಎಂದು ಹೇಳಲಾಗಿದೆ.