ಹೈದರಾಬಾದ್: ಪೂರ್ವ ಲಡಾಖ್ನ ಗಾಲ್ವಾನ್ ಗಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ದೇಶದೆಲ್ಲೆಡೆ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಭಾರತ ಸರ್ಕಾರ ಸೋಮವಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿ ಆದೇಶ ನೀಡಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ 2000ರ ಸೆಕ್ಷನ್ 69 ಎ ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗಿದೆ. ಭಾರತದ ಸಾರ್ವಭೌಮತ್ವ, ರಕ್ಷಣೆ, ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ 59 ಆ್ಯಪ್ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಪಷ್ಟನೆ ನೀಡಿದೆ.
ಮೊಬೈಲ್ನಲ್ಲಿ ಈಗಾಗಲೇ ಇನ್ಸ್ಟಾಲ್ ಆಗಿರುವ ನಿಷೇಧಿತ ಆ್ಯಪ್ಗಳ ಕಥೆಯೇನು?
ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿ ಭಾರತ ಸರ್ಕಾರದ ಆದೇಶ ನೀಡಿದ ಮರುದಿನವೇ ಟಿಕ್‌ಟಾಕ್ ಅನ್ನು ಭಾರತದ ಗೂಗಲ್ ಪ್ಲೇ, ಆ್ಯಪಲ್ ಆ್ಯಪ್ ಸ್ಟೋರ್ನಿಂದ ತೆಗೆದುಹಾಕಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀವೀಗ ಟಿಕ್‌ಟಾಕ್ ಆ್ಯಪ್ ಹುಡುಕಿದರೆ 'ಈ ಐಟಂ ನಿಮ್ಮ ದೇಶದಲ್ಲಿ ಲಭ್ಯವಿಲ್ಲ' ಎಂಬ ಸಂದೇಶ ಬರುತ್ತದೆ.
ನಿಷೇಧಿತ ಆ್ಯಪ್ಗಳನ್ನು ಬ್ಲಾಕ್ ಮಾಡುವ ಕುರಿತು ಅಧಿಕಾರಿಗಳು ಭಾರತೀಯ ಅಂತರ್ಜಾಲ ಸೇವಾ ಪೂರೈಕೆದಾರರು (ಐಎಸ್‌ಪಿಗಳು) ಮತ್ತು ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ (ಟಿಎಸ್‌ಪಿ) ಮಾತುಕತೆ ನಡೆಸುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಿಲ್ಲ.
ಚಿಂಗಾರಿ ಆ್ಯಪ್:
ಬ್ಯಾನ್ ಆದ ಆ್ಯಪ್ಗಳ ಪೈಕಿ ಕೆಲವು ಅಪ್ಲಿಕೇಶನ್‌ಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ, ವಿಶೇಷವಾಗಿ ಟಿಕ್‌ಟಾಕ್. ಇದು ದೇಶದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಟಿಕ್ಟಾಕ್ನಂತಹ ಮನರಂಜನಾ ಆ್ಯಪ್ನಿಂದ ಭಾರತೀಯ ಬಳಕೆದಾರರೀಗ ಹೊರಬರಬೇಕಿದೆ. ಇದಕ್ಕೆ ಪರ್ಯಾಯವಾಗಿ ಸ್ವದೇಶಿ ಆ್ಯಪ್ ಅನ್ನು ಜನ ಬಯಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಚಿಂಗಾರಿ ಆ್ಯಪ್ ಸದ್ದು ಮಾಡುತ್ತಿದೆ.
ಹೌದು.., ಟಿಕ್ಟಾಕ್ಗೆ ಪರ್ಯಾಯವಾಗಿರುವ 'ಚಿಂಗಾರಿ' ಎಂಬ ದೇಸಿ ಆ್ಯಪ್ ಅನ್ನು ಭಾರತೀಯರು ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಚೀನಾದ 59 ಆ್ಯಪ್ಗಳ ಬ್ಯಾನ್ ಬಳಿಕ ನಿನ್ನೆ ರಾತ್ರಿಯಿಂದ ಚಿಂಗಾರಿ ಆ್ಯಪ್, 1 ಲಕ್ಷ ಡೌನ್ಲೌಡ್ ಮತ್ತು ಗಂಟೆಗೆ 2 ಮಿಲಿಯನ್ ವೀಕ್ಷಣೆ ಗಳಿಸಿದೆ.
ಚಿಂಗಾರಿ ಆ್ಯಪ್ನ ವಿಶೇಷತೆಗಳು:
ಕಳೆದ ವರ್ಷ ಬೆಂಗಳೂರು ಮೂಲದ ಪ್ರೋಗ್ರಾಮರ್‌ಗಳಾದ ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅವರು ಈ ಆ್ಯಪ್ ಸ್ಥಾಪಿಸಿದ್ದು, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಒಂದು ವರ್ಷದಲ್ಲಿ 30 ಲಕ್ಷ ಮಂದಿ ಇದನ್ನು ಡೌನ್ಲೌಡ್ ಮಾಡಿಕೊಂಡಿದ್ದಾರೆ.
ಚಿಂಗಾರಿ ಬಳಕೆದಾರರಿಗೆ ಆ್ಯಪ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್ಲೋಡ್ ಮಾಡಲು, ಸ್ನೇಹಿತರೊಂದಿಗೆ ಚಾಟ್ ಮಾಡಲು, ಹೊಸ ಜನರೊಂದಿಗೆ ಸಂವಹನ ನಡೆಸಲು, ವಿಷಯ ಹಂಚಿಕೊಳ್ಳಲು ಮತ್ತು ಫೀಡ್ ಮೂಲಕ ಬ್ರೌಸ್ ಮಾಡಲು ಅವಕಾಶ ನೀಡುತ್ತದೆ.
ನಿಷೇಧದ ಪರಿಣಾಮವೇನು?
ಭಾರತದ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹೊರಟಿದ್ದ ಚೀನಾಗೆ ಇದು ಎಚ್ಚರಿಕೆಯಾಗಿದ್ದು, ಚೀನೀ ವ್ಯವಹಾರಗಳಿಗೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ. ಆದರೆ ನಿಷೇಧಿತ ಪಟ್ಟಿಯಲ್ಲಿರುವ ಕೆಲವು ಅಪ್ಲಿಕೇಶನ್‌ಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿದ್ದು, ಬಳಕೆದಾರರು ಈಗ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿದೆ. ಅಲ್ಲದೆ, ಈ ಪ್ಲಾಟ್‌ಫಾರ್ಮ್‌ಗಳು ಅನೇಕ ಭಾರತೀಯರಿಗೆ ಆದಾಯದ ಮೂಲ ಕೂಡ ಆಗಿದೆ. ಬ್ಯಾನ್ ಆದ ಆ್ಯಪ್ ಕಂಪನಿಗಳ ಶಾಖೆಗಳು ಭಾರತದಲ್ಲೂ ಇರುವುದರಿಂದ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ.
ಭಾರತದಲ್ಲಿ ಬ್ಯಾನ್ ಆಗದ ಚೀನಾ ಆ್ಯಪ್ಗಳು:
ನಿಷೇಧಿತ ಆ್ಯಪ್ಗಳ ಪಟ್ಟಿಯಲ್ಲಿ ಈ ಕೆಳಗಿನ ಕೆಲವು ಚೀನಾ ಅಪ್ಲಿಕೇಶನ್‌ಗಳ ಹೆಸರಿಲ್ಲ.
- ಪಬ್‌ಜಿ ಮೊಬೈಲ್ (PUBG Mobile)
- ಎಂವಿ ಮಾಸ್ಟರ್ (MV Master)
- ಅಲಿಎಕ್ಸ್ಪ್ರೆಸ್ ( AliExpress)
- ಟರ್ಬೊ ವಿಪಿಎನ್ (TurboVPN)
- ಡೊಮೊಬೈಲ್ನ ಆ್ಯಪ್ಲಾಕ್ (App Lock by DoMobile)
- ರೋಜ್ ಬುಜ್ ವಿ ಮೀಡಿಯಾ (Rozz Buzz we media)
- 360 ಸೆಕ್ಯುರಿಟಿ ( 360 Security)
- ಆ್ಯಪ್ಲಾಕ್ಸ್ (App locks)
- ನೊನೊ ಲೈವ್ (Nono live)
- ಗೇಮ್ ಆಫ್ ಸುಲ್ತಾನ್ಸ್ (Game of Sultans)
- ಮಾಫಿಯಾ ಸಿಟಿ (Mafia City)
- ಬ್ಯಾಟಲ್ ಆಫ್ ಎಂಪೈರ್ಸ್ (Battle of Empires)
ಭಾರತದಲ್ಲಿ ವಿವಾದಾತ್ಮಕ PUBG ಏಕೆ ನಿಷೇಧವಾಗಿಲ್ಲ?
ಪಬ್‌ಜಿ, ಸಂಪೂರ್ಣವಾಗಿ ಚೀನಾ ಆ್ಯಪ್ ಅಲ್ಲ. ದಕ್ಷಿಣ ಕೊರಿಯಾದ ಬ್ಲೂ ಹೋಲ್ ಎಂಬ ಕಂಪನಿ ಇದನ್ನು ರಚಿಸಿ, ನಿರ್ವಹಿಸುತ್ತಿತ್ತು. ಆದರೆ PUBG ಜನಪ್ರಿಯವಾದ ಬಳಿಕ ಬ್ಲೂ ಹೋಲ್ ಜೊತೆ ಚೀನಾ ಕಂಪನಿ ಟೆನ್ಸೆಂಟ್ ಕೈಜೋಡಿಸಿತು. ಆನಂತರ ಪಬ್‌ಜಿಯ ಹೆಚ್ಚಿನ ನಿರ್ವಹಣೆಯನ್ನು ಚೀನಾ ವಹಿಸಿಕೊಂಡಿತು. ಹೀಗಾಗಿ ಸದ್ಯ ಪಬ್‌ಜಿ ಜಂಟಿ ಮಾಲೀಕತ್ವದಲ್ಲಿರುವುದರಿಂದ ಭಾರತ ಸರ್ಕಾರ ಇದನ್ನು ನಿಷೇಧಿಸುವ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ.
ಇದು ಪಬ್‌ಜಿ ವಿಷಯವಾದರೆ ಉಳಿದ ಈ ಮೇಲಿನ ಆ್ಯಪ್ಗಳು ಬ್ಯಾನ್ ಆಗದಿರಲು ಕೆಲ ಕಾರಣಗಳಿವೆ. ಈ ಆ್ಯಪ್ಗಳು ಬಳಕೆದಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡಲಿಲ್ಲ. ಆದರೂ ಈ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಮುಂದೆ ಇದನ್ನು ನಿಷೇಧಿಸುವ ಸಾಧ್ಯತೆಗಳಿವೆ.