ಅಹಮದಾಬಾದ್:ಬಾಯ್ ಫ್ರೆಂಡ್ ಒಬ್ಬ16 ವರ್ಷದ ಬಾಲಕಿಯ ಖಾಸಗಿ ವಿಡಿಯೋ ಲೀಕ್ ಮಾಡಿದ್ದಾನೆ. ಇದ್ರಿಂದ ಅವಮಾನ ಮತ್ತು ಬೇಸರಗೊಂಡ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಗುಜರಾತ್ನ ಚಾರ್ನಗರದಲ್ಲಿ ನಡೆದಿದೆ.
ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕ ಆಕೆಯ ಜೊತೆಗಿದ್ದ ಖಾಸಗಿ ವಿಡಿಯೋ ತುಣುಕುಗಳನ್ನು ತನ್ನ ಗೆಳೆಯರಿಗೆ ಹಂಚಿದ್ದಾನೆ. ಫೆ. 29ರಂದು ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು. ಪೋಷಕರು ಈ ಕುರಿತಾಗಿ ಪೊಲೀಸರಿಗೂ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ಪೂರ್ಣ ವಿವರ:
ಕಳೆದ ಕೆಲ ತಿಂಗಳಿಂದ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕ ಆಕೆಯೊಂದಿಗಿನ ತನ್ನ ಖಾಸಗಿ ದೃಶ್ಯಾವಳಿ ಸೆರೆ ಹಿಡಿದು ಮೊಬೈಲ್ನಲ್ಲಿಟ್ಟುಕೊಂಡಿದ್ದ. ಇದೀಗ ದಿಢೀರ್ ಆಗಿ ಅವುಗಳನ್ನು ತನ್ನ ಗೆಳೆಯರಿಗೆ ಶೇರ್ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಯುವಕನ ವಿರುದ್ಧ ಹಾಗೂ ಉಳಿದ ಮೂವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ದೂರುಪಯೋಗ ಪಡಿಸಿಕೊಂಡಿರುವ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.