ಕೋಲ್ಕತಾ (ಪಶ್ಚಿಮ ಬಂಗಾಳ): ಪಕ್ಷದ ಶಾಸಕರೊಬ್ಬರ ಅಸ್ವಾಭಾವಿಕ ಸಾವಿನ ಕುರಿತು ಬಿಜೆಪಿ ಬೆಂಬಲಿಗರು ಬಂದ್ಗೆ ಕರೆ ನೀಡಿದ್ದು, ಪೊಲೀಸರೊಂದಿಗೆ ಘರ್ಷಣೆ ನಡೆಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ಬಂದ್ ಪ್ರಾರಂಭವಾಗಿದೆ. ಕೆಲವು ಸ್ಥಳಗಳಲ್ಲಿ ಅಂಗಡಿಗಳು ಮುಚ್ಚಿದ್ದು, ರಸ್ತೆಗಳಲ್ಲಿ ಕಡಿಮೆ ಸಂಖ್ಯೆಯ ವಾಹನ ಓಡಾಟದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೆಮ್ತಾಬಾದ್ ಶಾಸಕ ದೇಬೇಂದ್ರ ನಾಥ್ ರೇ ಅವರ ಶವ ಉತ್ತರ ದಿನಾಜ್‌ಪುರ ಜಿಲ್ಲೆಯ ಬಿಂದಾಲ್ ಗ್ರಾಮದಲ್ಲಿರುವ ಅವರ ಮನೆಯ ಸಮೀಪದ ಶಟರ್ ಅಂಗಡಿಯ ಹೊರಗಿರುವ ವರಾಂಡಾದ ಸೀಲಿಂಗ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮತ್ತೊಂದೆಡೆ ಅವರ ಶರ್ಟ್ ಜೇಬಿನಿಂದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ. ಆದರೂ ಅವರ ಕುಟುಂಬ ಮತ್ತು ಬಿಜೆಪಿ ನಾಯಕರು ರೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ, ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ಉತ್ತರ ಬಂಗಾಳ ರಾಜ್ಯ ಸಾರಿಗೆ ನಿಗಮ (ಎನ್‌ಬಿಎಸ್‌ಟಿಸಿ) ಡಿಪೋದಿಂದ ಬಸ್‌ಗಳು ಹೊರ ಬರದಂತೆ ತಡೆಯುತ್ತಿದ್ದಾಗ ಬಿಜೆಪಿ ಬೆಂಬಲಿಗರು ಕೂಚ್‌ಬೆಹರ್ ಪಟ್ಟಣದಲ್ಲಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು.