ಕನ್ನೌಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ತಿರ್ವಾ ಕ್ಷೇತ್ರದ ಬಿಜೆಪಿ ಶಾಸಕ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅಸಭ್ಯವಾಗಿ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಕೈಲಾಶ್ ಸಿಂಗ್ ರಜಪೂತ್, ಸಿಬ್ಬಂದಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕರನ್ನು ನಿಂದಿಸಿದ್ದಾರೆ. ಅಲ್ಲದೆ ಪೆಟ್ರೋಲ್ ಬಂಕ್ ಅನ್ನು ಮುಚ್ಚಲು ಬೆದರಿಕೆ ಹಾಕಿದ್ದಾರೆ. ಸಿಬ್ಬಂದಿ ಮೇಲೆ ಶಾಸಕ ಹಲ್ಲೆಗೆ ಯತ್ನಿಸುತ್ತಿದ್ದಾಗ ಸ್ಥಳದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬಂದು ಶಾಸಕನನ್ನು ತಡೆದಿದ್ದಾನೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ಎಂಎಲ್ಎ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಕೈಲಾಶ್ ಸಿಂಗ್, ಕಳೆದ ಜೂನ್ 22 ರಂದು ಕಾನ್ಪುರದಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಅಂದು ರಾತ್ರಿ 9:10ರ ಸುಮಾರಿಗೆ ಕಾರಿಗೆ ಇಂಧನ ತುಂಬಲು ಚಾಲಕ ತಿರ್ವಾದ ಪೆಟ್ರೋಲ್ ಬಂಕ್ನಲ್ಲಿ ಕಾರು ನಿಲ್ಲಿಸಿದ್ದ. ಈ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ವಂಚಿಸಿದ್ದಾರೆ ಎಂದು ಆರೋಪಿಸಿದ ಶಾಸಕ, ಪೆಟ್ರೋಲ್ ಹಾಕುವ ಮುಂಚೆಯೇ ಮೀಟರ್ ಓಡಲಾರಂಭಿಸಿದರೂ ಪೈಪ್ನಿಂದ ಯಾವುದೇ ಪೆಟ್ರೋಲ್ ಹೊರಬರುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನು ಸಿಬ್ಬಂದಿಯ ಗಮಕ್ಕೆ ತಂದು ಪ್ರತಿಭಟಿಸಿದಾಗ, ಕುಡಿದ ಅಮಲಿನಲ್ಲಿದ್ದ ಆತ ನನ್ನ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾನೆ. ಆ ಸಂದರ್ಭ ನಾನು ಕೂಡಾ ಆತನಿಗೆ ಪ್ರತಿಯಾಗಿ ನಿಂದಿಸಿದ್ದೇನೆ ಎಂದು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.