ನವದೆಹಲಿ: ಲೋಕಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕಚ್ಚಾಟ ಹೆಚ್ಚುತ್ತಿದೆ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲೂ ಪರಸ್ಪರ ಕದನಕ್ಕಿಳಿದಿವೆ.
ಅಧಿಕೃತ ಟ್ವಿಟ್ಟರ್ ಖಾತೆ ಬಳಸಿ ಕಾಂಗ್ರೆಸ್-ಬಿಜೆಪಿ ಪರಸ್ಪರ ಕಾಲೆಳೆದುಕೊಳ್ಳುತ್ತಿವೆ. ಪ್ರಧಾನಿ ಮೋದಿ ಆರಂಭಿಸಿರುವ #MainBhiChowkidar ಅಭಿಯಾನಕ್ಕೆ ಪ್ರತಿಯಾಗಿ @AmbaniKaChela ಹಾಗೂ Nirav Modi ಹೆಸರಿರುವ ಖಾತೆಗಳ ಮೂಲಕ ಮೋದಿಗೆ ಶ್ಲಾಘನೆ ವ್ಯಕ್ತಪಡಿಸಲಾಗಿದೆ. ಇದನ್ನ ಬಳಸಿಕೊಂಡ ಕಾಂಗ್ರೆಸ್, ಮೋದಿ ತಮ್ಮ ಸಂಗಡಿಗರೊಂದಿಗೆ ಸಂಪರ್ಕದಲ್ಲಿರುವುದನ್ನು ಕಾಣುತ್ತಿರುವುದು ಒಳ್ಳೆಯ ಅವಕಾಶ ಎಂದು ಪಿಎಂಗೆ ಕುಟುಕಿದೆ.
ಇದಕ್ಕೆ ಬಿಜೆಪಿಯೂ ತಿರುಗೇಟು ನೀಡಿದೆ. ಡಿಯರ್ @INCIndia ಅಪ್ರಮಾಣಿಕತೆ, ವಂಚನೆ, ಫೋಟೋಶಾಪ್ನಲ್ಲಿ ಎಡಿಟ್ ಮಾಡಿದ ಫೋಟೋಗಳೇನಿದ್ದರೂ ನಿಮ್ಮ ಗುರುತು. ಹಲವು ದಶಕಗಳಿಂದ ನಿಮ್ಮ ನಾಯಕರೇ ಇವುಗಳನ್ನು ಬಳಸಿ ದೇಶದಲ್ಲಿ ಲೂಟಿ ಹೊಡೆದಿದ್ದಾರೆ. ಇಂತಹ ಕಾಂಗ್ರೆಸ್ ಸಂಸ್ಕೃತಿ ವಿರುದ್ಧ ಇಡೀ ದೇಶ ಎಚ್ಚೆತ್ತು #MainBhiChowkidar ಎಂದು ಹೇಳುತ್ತಿದೆ ಅಂತ ಬಿಜೆಪಿ ಟ್ವೀಟಾಸ್ತ್ರ ಪ್ರಯೋಗಿಸಿದೆ.
ಆದರೆ, ಕಾಂಗ್ರೆಸ್ ಇಷ್ಟಕ್ಕೆ ಸುಮ್ಮನಾಗದೆ ಮತ್ತೆ ಬಿಜೆಪಿಗೆ ಟಾಂಗ್ ಕೊಟ್ಟಿದೆ. ಡಿಯರ್ ಬಿಜೆಪಿ, ನಿಮ್ಮ ಅಭಿಯಾನ ಸೋತಿದ್ದಕ್ಕೆ ಸಾರಿ. ನಿನ್ನ ನೋವಿಗೆ ನಮ್ಮ ಅನುಕಂಪವಿದೆ. ಸ್ವಲ್ಪವಾದರೂ ನೈಜವಾಗಿರಲು ಯತ್ನಿಸಿ. ಹಾಗೆಯೇ, ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷದಿಂದ ಪ್ರೀತಿಯ ಅಪ್ಪುಗೆ ನಿಮಗೆ ಎಂದು ಕಾಲೆಳೆದಿದೆ. ಇದಕ್ಕೆ #EkHiChowkidarChorHai ಟ್ಯಾಗ್ ಮಾಡಿದ ಕಾಂಗ್ರೆಸ್, ಬಿಜೆಪಿಯನ್ನ ಗೇಲಿ ಮಾಡಿದೆ.