ಕೈಮೂರ್ (ಬಿಹಾರ): ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪಿಸ್ತೂಲ್ ಹಿಡಿದು ಗುಂಡುಗಳನ್ನು ಹಾರಿಸಿದ ವಿಡಿಯೋ ವೈರಲ್ ಆದ ನಂತರ ದಂಡಾವಶ್ ಗ್ರಾಮದ 25 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಮೇ 21 ರಂದು ಭೂ ವಿವಾದದ ಕುರಿತು ಗ್ರಾಮಸ್ಥರ ನಡುವೆ ನಡೆದ ಗಲಾಟೆಯ ಸಂದರ್ಭದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಗಾಳಿಯಲ್ಲಿ ಗುಂಡು ಹಾರಿಸಿದ ಬನಾರಸ್ ವಿವಿ ವಿದ್ಯಾರ್ಥಿನಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, 10-12 ಗ್ರಾಮಸ್ಥರು ಕಬ್ಬಿಣದ ರಾಡ್ ಹಾಗೂ ಬಡಿಗೆಗಳನ್ನು ಹಿಡಿದು ಘರ್ಷಣೆ ನಡೆಸಿದ್ದು, ಹಿಂಸಾತ್ಮಕ ಪ್ರಕರಣವಾಗಿದೆ. ಈ ಪರಿಸ್ಥಿತಿಯನ್ನು ಗಮನಿಸಿದ ವಿದ್ಯಾರ್ಥಿನಿ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದಾಳೆ. ಘಟನೆಯಲ್ಲಿ 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಗುಂಡಿನ ದಾಳಿಯಿಂದ ಯಾರೂ ಗಾಯಗೊಂಡಿಲ್ಲ ಎಂದು ಕೈಮೂರ್ ಎಸ್ಪಿ ದಿಲ್ನಮಾಝ್ ಅಹಮದ್ ತಿಳಿಸಿದರು.
ಆಕೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಹೆಚ್‌ಯು) ವಿಜ್ಞಾನ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ನಂತರ ಕೈಮೂರ್‌ಗೆ ಬಂದಿದ್ದಾಳೆ.
ಘಟನೆಯ ನಂತರ ಯುವತಿಯ ಮನೆಯಿಂದ ಲೋಡ್ ಮಾಡಿದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗೂ ಶಸ್ತ್ರಾಸ್ತ್ರದ ಮೂಲವನ್ನು ಕಂಡುಹಿಡಿಯಲು ವಿಚಾರಣೆ ನಡೆಸುತ್ತಿದ್ದಾರೆ.