ಕೋಲ್ಕತ್ತಾ:ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ ಇದ್ದರೂ ಮಾನವ ಕಳ್ಳಸಾಗಣೆಯಲ್ಲಿ ಪಶ್ಚಿಮ ಬಂಗಾಳ ದೇಶದಲ್ಲೇ ಅಗ್ರ ಸ್ಥಾನದಲ್ಲಿರುವುದು ನೋವಿನ ಸಂಗತಿಯಾಗಿದೆ ಎಂದು ಕೇಂದ್ರ ಸಚಿವೆ ದೇಬಶ್ರೀ ಚೌಧರಿ ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಸಂಕಷ್ಟದ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಚೌಧರಿ ಆರೋಪಿಸಿದ್ದಾರೆ.
ಫೇಸ್‌ಬುಕ್ ಲೈವ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರು ನಿರಂತರ ಲೈಂಗಿಕ ಮತ್ತು ಇತರ ಕಿರುಕುಳಗಳನ್ನು ಎದುರಿಸುತ್ತಿದ್ದಾರೆ. ಆದರೆ ಅದರಲ್ಲಿ ಎಷ್ಟು ಮಂದಿ ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಒಬ್ಬ ಮಹಿಳೆ ಎಂಬುದು ಸತ್ಯ. ಅವರು ರಾಜ್ಯದ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ರಾಜ್ಯವು ಮಹಿಳಾ ಮುಖ್ಯಮಂತ್ರಿಯನ್ನು ಹೊಂದಿರುವಾಗ ಮಾನವ ಕಳ್ಳಸಾಗಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ" ಎಂದು ಚೌಧರಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ 'ಬೇಟಿ ಬಚಾವೊ ಬೇಟಿ ಪಡಾವೊ' ಅಭಿಯಾನ ಮುಂದುವರೆದಿದ್ದು, ಇದು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯ ನಿರಂತರ ಪ್ರಕ್ರಿಯೆಯಾಗಿದೆ. ದೇಶದ ಎಲ್ಲಾ ಮಹಿಳೆಯರು ಮತ್ತು ಮಕ್ಕಳನ್ನು ಎಲ್ಲಾ ರೀತಿಯಲ್ಲೂ ಸಬಲ ಮಾಡುವುದು ಈ ಕಾರ್ಯಕ್ರಮದ ಗುರಿಯಾಗಿದೆ ಎಂದರು.