ಮುಂಬೈ:ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚು ಉಲ್ಭಣಗೊಳ್ಳುತ್ತಿದ್ದು, ಹೀಗಾಗಿ ಅನೇಕ ಕ್ರೀಡಾ ಕೂಟಗಳು ಮುಂದೂಡಿಕೆಯಾಗಿವೆ. ಇದರ ಬೆನ್ನಲ್ಲೇ ಇದೇ ತಿಂಗಳ ಕೊನೆಯಲ್ಲಿ(ಮಾರ್ಚ್ 29) ಆರಂಭಗೊಳ್ಳಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮುಂದೂಡಿಕೆಯಾಗಿದ್ದು, ಏಪ್ರಿಲ್ 15ರ ನಂತರ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿತ್ತು. ಆದರೆ, ಇದೀಗ ಮಹತ್ವದ ಕ್ರೀಡಾಕೂಟ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವ ಕಾರಣ ಐಪಿಎಲ್ ರದ್ಧುಗೊಳಿಸುವಂತೆ ಹೆಚ್ಚಿನ ಒತ್ತಡ ಕೇಳಿ ಬರುತ್ತಿದೆ.
ಟೋಕಿಯೋ ಒಲಿಂಪಿಕ್ಸ್ ನಿಗದಿಯಾಗಿರುವಂತೆ ಜುಲೈ 24ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ, ರಕ್ಕಸ ಮಹಾಮಾರಿ ಕೊರೊನಾ ತನ್ನ ವ್ಯಾಪಕತೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ವರ್ಷ ಮುಂದೂಡಿಕೆ ಮಾಡಿ ನಿನ್ನೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸುವ ಕುರಿತು ಎಲ್ಲ ಪ್ರಾಂಚೈಸಿಗಳೊಂದಿಗೆ ನಡೆದ ವಿಡಿಯೋ ಸಂವಾದ ಕೂಡ ಅರ್ಧಕ್ಕೆ ಮೊಟಕುಗೊಂಡಿರುವ ಕಾರಣ ಈ ಸಲದ ಐಪಿಎಲ್ ನಡೆಯುವುದು ಬಹುತೇಕ ಕಠಿಣವಾಗಿದೆ. ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಮುಂದಿನ 21 ದಿನಗಳ ಕಾಲ ದೇಶವನ್ನ ಸಂಪೂರ್ಣವಾಗಿ ಲಾಕ್ಡೌನ್ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಐಪಿಎಲ್ ಕೂಡ ಆರಂಭಗೊಳ್ಳುವುದು ಅನುಮಾನ ಎನ್ನಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ, ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ಟೂರ್ನಿ ಆಯೋಜನೆ ಕುರಿತು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಸದ್ಯ ಕಾಯ್ದು ನೋಡುವ ತಂತ್ರಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ. ಇನ್ನು ಏಪ್ರಿಲ್ ಮುಕ್ತಾಯದ ವೇಳೆಗೆ ಕೊರೊನಾ ಪರಿಸ್ಥಿತಿ ಸುಧಾರಣೆ ಕಂಡರೆ ಜುಲೈ ತಿಂಗಳಲ್ಲಿ ಅಥವಾ ಸೆಪ್ಟೆಂಬರ್ನಲ್ಲಿ ಇದರ ಆಯೋಜನೆ ಮಾಡುವ ಬಗ್ಗೆ ವೇಳಾಪಟ್ಟಿ ರಚಿಸುವ ಇರಾದೆಯಿದೆ ಎಂದಿದ್ದಾರೆ.