ಢಾಕಾ:ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದ ಕಾರಣ ನಿಧನರಾಗಿದ್ದು, ದೇಶದಲ್ಲಿ ಏಳು ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದೆ. ಬಾಂಗ್ಲಾದೇಶದ ದೆಹಲಿ ರಾಯಭಾರ ಕಚೇರಿಯಲ್ಲಿ ಸಂತಾಪ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ... ಬಾಂಗ್ಲಾದೇಶದಲ್ಲೂ ಶೋಕಾಚರಣೆ - ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ ಬಾಂಗ್ಲಾದೇಶದ ನಿಜವಾದ ಸ್ನೇಹಿತ. ಅವರನ್ನು ಯಾವಾಗಲೂ ಬಾಂಗ್ಲಾದೇಶದ ಜನರು ಹೆಚ್ಚು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ ಎಂದು ಬಾಂಗ್ಲಾದೇಶ ಹೇಳಿದೆ.
ಬಾಂಗ್ಲಾದೇಶದಲ್ಲಿ ಪ್ರಣಬ್ ಮುಖರ್ಜಿ ನಿಧನಕ್ಕೆ ಗೌರವ ಸಲ್ಲಿಕೆ ಮಾಡಲಾಗಿದ್ದು, ಅಲ್ಲಿನ ಸರ್ಕಾರಿ ಕಚೇರಿ, ಅರೆ ಸರ್ಕಾರಿ ಕಚೇರಿ ಕಟ್ಟಡಗಳ ಮೇಲಿನ ಬಾಂಗ್ಲಾ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲಾಗಿದೆ. ಬಾಂಗ್ಲಾ ವಿಮೋಚನೆಗೆ ಪ್ರಣಬ್ ಮುಖರ್ಜಿ ನೀಡಿದ್ದ ಕೊಡುಗೆಗೋಸ್ಕರ 2013ರಲ್ಲಿ ಮಾಜಿ ರಾಷ್ಟ್ರಪತಿಗೆ ಬಾಂಗ್ಲಾ ದೇಶ ಮುಕ್ತಿಜುದ್ದೋ ಸೊಮ್ಮಾನೊನಾ ಎಂಬ ಗೌರವ ನೀಡಿದೆ. 1971ರಲ್ಲಿ ಬಾಂಗ್ಲಾ ವಿಮೋಚನೆ ಹಾಗೂ ಭಾರತ-ಬಾಂಗ್ಲಾ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಣಬ್ ಮುಖರ್ಜಿ ಮಹತ್ವದ ಕಾರ್ಯ ನಿರ್ವಹಿಸಿದ್ದರು.
ಈಗಾಗಲೇ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಬಾಂಗ್ಲಾದೇಶವು ನಿಜವಾದ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹಸೀನಾ, “ಪ್ರಣಬ್ ಮುಖರ್ಜಿ ಬಾಂಗ್ಲಾದೇಶದ ನಿಜವಾದ ಸ್ನೇಹಿತ. ಅವರನ್ನು ಯಾವಾಗಲೂ ಬಾಂಗ್ಲಾದೇಶದ ಜನರು ಹೆಚ್ಚು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಅಚಲ ಬೆಂಬಲ ಮತ್ತು ಅದರಲ್ಲೂ ವಿಶೇಷವಾಗಿ ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಅವರ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸಲಾಗುವುದು” ಎಂದಿದ್ದಾರೆ.