ನವದೆಹಲಿ: ಅಸ್ಸೋಂನ ಬಾಗ್ಜನ್ನಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ನ ತೈಲ ಬಾವಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ತಡೆಯಲು ವಿಫಲವಾದ ಕಾರಣ ಪರಿಸರ, ಮನುಷ್ಯ ಮತ್ತು ವನ್ಯಜೀವಿಗಳಿಗೆ ಹಾನಿ ಮಾಡಿದ್ದಕ್ಕಾಗಿ ಆಯಿಲ್ ಇಂಡಿಯಾ ಲಿಮಿಟೆಡ್‌ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 25 ಕೋಟಿ ರೂಪಾಯಿ ದಂಡ ವಿಧಿಸಿದೆ.
ಮೇ 27ರಿಂದ ಜೂನ್ 9ರವರೆಗೆ ಬಾಗ್ಜನ್ -5 ತೈಲ ಬಾವಿಯಲ್ಲಿ ಸಂಭಸವಿಸಿದ ಅಗ್ನಿ ಅವಘಡದಿಂದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ ಸಾವಿಗೀಡಾಗಿದ್ದರು.
ಬ್ರಹ್ಮಪುತ್ರ ಜಲಾನಯನ ಪ್ರದೇಶದಲ್ಲಿನ ದೊಡ್ಡ ಅನಿಲ ನಿಕ್ಷೇಪಗಳನ್ನು ಟ್ಯಾಪ್ ಮಾಡಲು ಒಐಎಲ್ ಸ್ಥಾಪಿಸಿದ 23 ತೈಲ ಬಾವಿಗಳಲ್ಲಿ ಬಾಗ್ಜನ್ ಕೂಡ ಒಂದು. ಇದು ಡಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ವಲಯ ಬಳಿ ಇದೆ.
ನ್ಯಾಯಮೂರ್ತಿ ಎಸ್.ಪಿ.ವಾಂಗ್ಡಿ ಮತ್ತು ತಜ್ಞ ಸದಸ್ಯ ಸಿದ್ಧಾಂತ ದಾಸ್ ಅವರನ್ನೊಳಗೊಂಡ ನ್ಯಾಯ ಪೀಠ, 'ಆರಂಭಿಕ ಮೊತ್ತ 25 ಕೋಟಿ ರೂಪಾಯಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್, ಟಿನ್ಸುಕಿಯಾ ಜಿಲ್ಲೆ, ಅಸ್ಸೋಂಗೆ ಜಮಾ ಮಾಡಬೇಕು. ಮತ್ತು ನ್ಯಾಯಮಂಡಳಿಯ ಮುಂದಿನ ಆದೇಶಗಳಿಗೆ ಬದ್ಧರಾಗಿರುವಂತೆ ನಾವು ಆಯಿಲ್ ಇಂಡಿಯಾ ಲಿಮಿಟೆಡ್‌ಗೆ ನಿರ್ದೇಶಿಸುತ್ತೇವೆ' ಎಂದಿದೆ.
ಹೈಕೋರ್ಟ್ ಮಾಜಿ ನ್ಯಾಯಾಧೀಶ ಬಿ.ಪಿ.ಕಟಕೆ ಅವರ ನೇತೃತ್ವದಲ್ಲಿ ಎಂಟು ಸದಸ್ಯರ ಸಮಿತಿಯನ್ನು ರಚಿಸಿದ್ದು, ಘಟನೆಗೆ ಸಂಬಂಧಿಸಿದಂತೆ 30 ದಿನಗಳಲ್ಲಿ ವರದಿ ಸಲ್ಲಿಸಲು ನ್ಯಾಯ ಮಂಡಳಿ ಸೂಚನೆ ನೀಡಿದೆ.