ಕೋವಿಡ್-19 ಕಾಯಿಲೆಯ ಚಿಕಿತ್ಸೆಗಾಗಿ ಹಲವಾರು ಔಷಧಿಗಳು ಒಂದಾದ ನಂತರ ಒಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಖ್ಯಾತ ಫಾರ್ಮಸಿ ಕಂಪನಿ ಗ್ಲೆನ್ ಫಾರ್ಮಾ, ಕೊರೊನಾ ಗುಣಪಡಿಸುವ ಔಷಧಿಯನ್ನು ಕಂಡು ಹಿಡಿದಿರುವುದಾಗಿ ಬಹಿರಂಗವಾಗಿ ಹೇಳಿತ್ತು. ಇದಕ್ಕೂ ಮುನ್ನ ಹೆಟೆರೊ ಕಂಪನಿ ಸಹ ಔಷಧಿಯೊಂದನ್ನು ಕಂಡು ಹಿಡಿದಿರುವುದಾಗಿ ಹೇಳಿಕೊಂಡಿತ್ತು. ಮುಂಬೈನ ಸಿಪ್ಲಾ ಕಂಪನಿ ಸಹ ಕೊರೊನಾ ವೈರಸ್ಗಾಗಿ ಹೊಸ ಔಷಧಿಯೊಂದನ್ನು ಬಿಡುಗಡೆ ಮಾಡಿದೆ.
ಈ ಮಧ್ಯೆ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಸಹ ಕೊರೊನಿಲ್ ಹೆಸರಲ್ಲಿ ಔಷಧಿಯನ್ನು ಪರಿಚಯಿಸಿದೆ. ಪತಂಜಲಿಯ 'ದಿವ್ಯ ಕೊರೊನಿಲ್' ಹೆಸರಿನ ಔಷಧಿಯನ್ನು ಹರಿದ್ವಾರದಲ್ಲಿ ಈಗಷ್ಟೇ ಬಿಡುಗಡೆ ಮಾಡಲಾಗಿದೆ. ಯೋಗ ಗುರು ರಾಮದೇವ್ ಹಾಗೂ ಪತಂಜಲಿ ಸಂಸ್ಥೆಯ ಸಿಇಓ ಬಾಲಕೃಷ್ಣ ಈ ಔಷಧಿಯ ಪ್ರಯೋಗಾಲಯ ವರದಿಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ.
ದಿವ್ಯ ಕೊರೊನಿಲ್ ಔಷಧಿಯನ್ನು ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಗಳ ಸಹಯೋಗದಲ್ಲಿ ತಯಾರಿಸಲಾಗಿದೆ. ಇದರ ಪ್ರಯೋಗಾಲಯ ಪರೀಕ್ಷೆಗಳು ಅಂತಿಮ ಹಂತದಲ್ಲಿವೆ ಎಂದು ಹೇಳಲಾಗಿದೆ. ಪ್ರಸ್ತುತ ಹರಿದ್ವಾರದ ದಿವ್ಯ ಫಾರ್ಮಸಿ ಹಾಗೂ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿಗಳು ಇದನ್ನು ತಯಾರಿಸುತ್ತಿವೆ.
ಇಂದೋರ್, ಜೈಪುರ್ಗಳ ಪ್ರಯೋಗಶಾಲೆ ಪರೀಕ್ಷೆಗಳು ಶೇ 100 ರಷ್ಟು ಯಶಸ್ವಿ ಎಂದ ಪತಂಜಲಿ!
ಸರ್ಕಾರದ ಅನುಮತಿಯ ನಂತರ ದಿವ್ಯ ಕೊರೊನಿಲ್ ಔಷಧಿಯನ್ನು ಇಂದೋರ್ ಹಾಗೂ ಜೈಪುರದ ಪ್ರಯೋಗಾಲಯಗಳಲ್ಲಿ ಟ್ರಯಲ್ಸ್ ನಡೆಸಲಾಗಿದೆ. ಕೋವಿಡ್-19 ವೈರಸ್ ಹರಡಲಾರಂಭಿಸಿದ ತಕ್ಷಣವೇ ಇದಕ್ಕಾಗಿ ಔಷಧಿ ಕಂಡುಹಿಡಿಯಲು ವಿಜ್ಞಾನಿಗಳ ತಂಡವೊಂದು ಕಾರ್ಯೋನ್ಮುಖವಾಗಿತ್ತು. ನೂರಾರು ಕೊರೊನಾ ಪಾಸಿಟಿವ್ ರೋಗಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದ್ದು, ಶೇ 100 ರಷ್ಟು ಯಶಸ್ವಿ ಫಲಿತಾಂಶ ಸಿಕ್ಕಿದೆ ಎಂದು ಪತಂಜಲಿ ಸಿಇಓ ಹೇಳಿದ್ದಾರೆ. ಕೊರೊನಿಲ್ ಔಷಧಿಯು 5 ರಿಂದ 14 ದಿನಗಳಲ್ಲಿ ಕೊರೊನಾ ವೈರಸ್ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಿಲ್ ಕಿಟ್ ಬೆಲೆ 545 ರೂ.
ಕೊರೊನಿಲ್ ಕಿಟ್ಗೆ 545 ರೂ. ಬೆಲೆ ನಿಗದಿಪಡಿಸಲಾಗುತ್ತಿದ್ದು, ಇದು 30 ದಿನಗಳವರೆಗೆ ತೆಗೆದುಕೊಳ್ಳಬಹುದಾದಷ್ಟು ಪ್ರಮಾಣದಲ್ಲಿರುತ್ತದೆ. ಬರುವ ಒಂದು ವಾರದಲ್ಲಿ ಕೊರೊನಿಲ್ ಪತಂಜಲಿಯ ಎಲ್ಲ ಔಷಧ ಅಂಗಡಿಗಳಲ್ಲಿ ಸಿಗಲಿದೆ. ಇನ್ನು ಇದಕ್ಕಾಗಿ ಆ್ಯಪ್ ಒಂದನ್ನು ರೂಪಿಸಲಾಗುತ್ತಿದ್ದು, ಅದರ ಮೂಲಕ ಆರ್ಡರ್ ಮಾಡಿದಲ್ಲಿ ಕಿಟ್ ಮನೆಗೇ ಬರಲಿದೆ.
ಕೊರೊನಿಲ್ನಲ್ಲಿ ಬಳಸಲಾದ ಸಾಮಗ್ರಿಗಳು
ಕೊರೊನಿಲ್ ಔಷಧಿಯು ಅಮೃತ ಬಳ್ಳಿ, ಅಶ್ವಗಂಧ, ತುಳಸಿ, ಶ್ವಾಸಾರಿ ಜ್ಯೂಸ್, ಅಂಧು ಎಣ್ಣೆಗಳ ಮಿಶ್ರಣವಾಗಿದೆ. ಪ್ರತಿದಿನ ಬೆಳಗ್ಗೆ ಒಂದು ಬಾರಿ ಹಾಗೂ ರಾತ್ರಿ ಒಂದು ಬಾರಿ ಈ ಔಷಧಿಯನ್ನು ಸೇವಿಸಬಹುದು ಎಂದು ಸಿಇಓ ಬಾಲಕೃಷ್ಣ ಹೇಳಿದ್ದಾರೆ.
ವೈರಸ್ ವಿರುದ್ಧ ಕೊರೊನಿಲ್ ಹೀಗೆ ಹೋರಾಡುತ್ತದೆ...
ಕೋವಿಡ್-19 ನ ರಿಸೆಪ್ಟರ್ ಬೈಂಡಿಂಗ್ ಡೊಮೈನ್ ಶರೀರದ ಆಂಜಿಯೋಟೆನ್ಸಿನ್-ಪರಿವರ್ತಿಸುವ ಕಿಣ್ವವನ್ನು ಸುತ್ತಿಕೊಳ್ಳದಂತೆ ಅಶ್ವಗಂಧಾ ತಡೆಯುತ್ತದೆ. ಅಂದರೆ ಕೊರೊನಾ ವೈರಸ್ ಶರೀರದ ಆರೋಗ್ಯವಂತ ಜೀವಕೋಶಗಳ ಮೇಲೆ ದಾಳಿ ಮಾಡುವುದನ್ನು ತಡೆಗಟ್ಟುತ್ತದೆ. ಇನ್ನು ಅಮೃತ ಬಳ್ಳಿಯು ಕೊರೊನಾ ಸೋಂಕನ್ನು ತಡೆಯುತ್ತದೆ ಹಾಗೂ ತುಳಸಿ ಕೊರೊನಾ ವೈರಸ್ನ ಆರ್ಎನ್ಎ ಮೇಲೆ ದಾಳಿ ನಡೆಸಿ ಅವು ದ್ವಿಗುಣವಾಗುತ್ತ ಹೋಗುವುದನ್ನು ತಡೆಗಟ್ಟುತ್ತದೆ.
ಮಾತ್ರೆಯೊಂದಿಗೆ ಶ್ವಾಸಾರಿ ವಟಿಯೂ ಲಭ್ಯ
ದಿವ್ಯ ಕೊರೊನಿಲ್ ಮಾತ್ರೆಗಳು ಜೂನ್ 23 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಇದರೊಂದಿಗೆ ಕಂಪನಿಯು ಶ್ವಾಸಾರಿ ವಟಿ ಮಾತ್ರೆಗಳನ್ನೂ ನೀಡಲಿದೆ. ಶ್ವಾಸಾರಿ ಜ್ಯೂಸ್ ಕಫ ಗಟ್ಟಿಯಾಗದಂತೆ ತಡೆಯುವ ಔಷಧವಾಗಿದೆ.
ಭಾರತದ ಮಾರುಕಟ್ಟೆಗೆ ಬಂದಿವೆ ಕೊರೊನಾ ತಡೆಯುವ ಹಲವಾರು ಔಷಧಿಗಳು
ಪ್ರಸ್ತುತ ಸಿಪ್ರೆಮಿ, ಫ್ಯಾಬಿಫ್ಲೂ ಹಾಗೂ ಕೋವಿಫೋರ್ ಔಷಧಿಗಳನ್ನು ಪ್ರಮುಖವಾಗಿ ಕೊರೊನಾ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಸಿಪ್ರೆಮಿ ಹಾಗೂ ಕೋವಿಪೋರ್ ಇವು ವೈರಸ್ ನಿರೋಧಕ ರೆಮೊಡೆವಿರ್ನ ಜೆನೆರಿಕ್ ರೂಪಗಳಾಗಿವೆ. ಇನ್ನು ಫ್ಯಾಬಿಫ್ಲೂ ಇದು ಇನ್ಫ್ಲೂಯೆಂಜಾ ನಿರೋಧಕ ಔಷಧಿ ಫಾವಿಪಿರಾವಿರ್ನ ಜೆನೆರಿಕ್ ರೂಪವಾಗಿದೆ. ಈ ಎಲ್ಲ ಔಷಧಿಗಳು ಇತ್ತೀಚೆಗಷ್ಟೇ ಅನುಮತಿ ಪಡೆದುಕೊಂಡಿವೆ, ಆದರೆ ಕೊರೊನಾ ವೈರಸ್ ಚಿಕಿತ್ಸೆಗಾಗಿ ಪತಂಜಲಿಯ ಕೊರೊನಿಲ್ ಔಷಧಿಗೆ ಸರ್ಕಾರ ಯಾವಾಗ ಅನುಮತಿ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಿಪ್ರೆಮಿ, ಫ್ಯಾಬಿಫ್ಲೂ ಹಾಗೂ ಕೋವಿಫೋರ್ ಬಗ್ಗೆ ಮತ್ತಷ್ಟು ಮಾಹಿತಿ:
ಫ್ಯಾಬಿಫ್ಲೂ
- ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೋವಿಡ್-19 ಸೋಂಕಿನ ರೋಗಿಗಳಿಗೆ ಇದನ್ನು ಬಳಸಲಾಗುತ್ತದೆ.