ಜಾರ್ಖಂಡ್: 'ಅಜಮ್ ಎಂಬಾ', ಇದು ಒರಾನ್ ಬುಡಕಟ್ಟು ಜನಾಂಗದ ಕುರುಖ್ ಭಾಷೆಯ ಪದ. 'ಅಜಮ್ ಎಂಬಾ' ಎಂದ್ರೆ ತುಂಬಾ ರುಚಿಯಾದ ಆಹಾರ ಎಂದರ್ಥ. ಈ ಹೆಸರಿನ ರೆಸ್ಟೋರೆಂಟ್ ಒಂದು ರಾಂಚಿಯಲ್ಲಿದ್ದು, ಇಲ್ಲಿ ಬುಡಕಟ್ಟು ಪದ್ಧತಿಯ ಸಾಂಪ್ರದಾಯಿಕ ರೀತಿಯ ಆಹಾರಗಳು ಸಿಗುತ್ತವೆ.
ಇಂದಿನ ಬಿಡುವಿಲ್ಲದ ಜೀವನದಲ್ಲಿ ಫಾಸ್ಟ್ ಫುಡ್ ಅನಿವಾರ್ಯವಾಗಿದೆ. ನಗರದ ಜನರು ತಮಗೆ ಇಷ್ಟವಾದ ಹಾಗೂ ಮನೆಯಂತಹ ಆಹಾರವನ್ನು ಅರಸಿ ಹೋಗುತ್ತಾರೆ. ರಾಂಚಿಯ ಅಜಮ್ ಎಂಬಾ ರೆಸ್ಟೋರೆಂಟ್, ಬುಡಕಟ್ಟು ಅಭಿರುಚಿಯ ಬಗ್ಗೆ ನಮಗೆ ಪರಿಚಯಿಸುತ್ತಿದೆ.
ಜನರು ಈ ರೆಸ್ಟೋರೆಂಟ್ಗೆ ಬಂದ ತಕ್ಷಣವೇ ಸ್ವಂತ ಮನೆಗೆ ಬಂದ ಅನುಭವ ಪಡೆಯುತ್ತಾರೆ. ಬುಡಕಟ್ಟು ಸಂಪ್ರದಾಯದ ಪ್ರಕಾರ ಕೈಗಳನ್ನು ಮೊದಲು ಸಾಂಪ್ರದಾಯಿಕ ಪಾತ್ರೆಗಳಲ್ಲಿ ತೊಳೆಯಲಾಗುತ್ತದೆ. ನಂತರ ಮನೆಯ ಹಾಗೆ ಚಾಪೆಯ ಮೇಲೆ ಗ್ರಾಹಕರನ್ನು ಕೂರಿಸಿ ಆಹಾರವನ್ನು ನೀಡಲಾಗುತ್ತದೆ.
ವಿಶೇಷವೆಂದರೆ ಈ ರೆಸ್ಟೋರೆಂಟ್‌ನಲ್ಲಿ ಅಕ್ಕಿಯನ್ನು ಒಳ್ಳಿನಲ್ಲಿ ಪುಡಿ ಮಾಡಲಾಗುತ್ತದೆ. ಹಾಗೂ ಮಸಾಲೆಗಳನ್ನು ಬಂಡೆಯ ಮೇಲೆ ಕಲ್ಲಿನಿಂದ ಜಜ್ಜಿ ಪುಡಿ ಮಾಡಲಾಗುತ್ತದೆ. ಹಾಗೂ ಸೌದೆಯ ಒಲೆಯ ಮೇಲೆ ಆಹಾರವನ್ನು ಬೇಯಿಸಲಾಗುತ್ತದೆ. ಇಲ್ಲಿ ಆಹಾರ ತಿನ್ನಲು ಸ್ವಲ್ಪ ಹೊತ್ತು ಕಾಯಬೇಕು. ಇಲ್ಲಿನ ಬುಡಕಟ್ಟು ಭಕ್ಷ್ಯದ ಪರಿಮಳವು ಗ್ರಾಹಕರನ್ನು ಹಿಡಿದಿಡುತ್ತೆ.
ರಾಂಚಿಯ ಹೆಸರಾಂತ ಸಂಸ್ಥೆಯಿಂದ ಗ್ರಾಮೀಣ ನಿರ್ವಹಣಾ ಪದವಿ ಪಡೆದ ನಂತರ, ಅರುಣಾ ಅವರಿಗೆ ಹಲವಾರು ಉದ್ಯೋಗಗಳ ಆಫರ್ ಬಂದಿದ್ದವು. ಆದರೆ ಈ ವಿಭಿನ್ನ ಆಹಾರ ರೆಸ್ಟೋರೆಂಟ್ ಮೂಲಕ ಹೊಸದನ್ನು ಪ್ರಯತ್ನಿಸಿದ್ದಾರೆ ಅರುಣಾ. ಈ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ 8 ಮಹಿಳೆಯರು ಸಹ ಸ್ವಾವಲಂಬಿಗಳಾಗುತ್ತಿದ್ದು, ಬುಡಕಟ್ಟು ಮಹಿಳೆಯರು ಹಿಂದುಳಿದವರು ಎಂಬ ಹಣೆಪಟ್ಟಿಯಿಂದ ಹೊರಬಂದಿದ್ದಾರೆ.
ರಾಂಚಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಬಂದು ಸಾಂಪ್ರದಾಯಿಕ ರುಚಿಯನ್ನು ಸವಿಯುತ್ತಾರೆ. ನೀವು ಕೂಡ ಯಾವಾಗಲಾದರೂ ಇಲ್ಲಿಗೆ ಭೇಟಿ ನೀಡಿದರೆ, ಈ ಶುಚಿ-ರುಚಿಯಾದ ಆಹಾರವನ್ನು ಸೇವಿಸಿ ಹಾಗೂ ಆನಂದಿಸಿ.