ಪಾಟ್ನಾ (ಬಿಹಾರ):ಭಾರತ್ ಬಂದ್ ವೇಳೆ ರೈಲ್ವೆ ಟ್ರ್ಯಾಕ್ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 25 ಮಂದಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಕಾರ್ಯಕರ್ತರು ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ನಳಂದಾ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಆರ್ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರಾಜಗೀರ್ ಮತ್ತು ನವದೆಹಲಿ ನಡುವೆ ಸಂಚಾರ ಮಾಡುವ ಶ್ರಮಜೀವಿ ಎಕ್ಸ್ಪ್ರೆಸ್ ರೈಲನ್ನು ಪಾವಾಪುರಿ ರೈಲು ನಿಲ್ದಾಣದಲ್ಲಿ ತಡೆಯಲು ಮುಂದಾಗಿದ್ದಾರೆ.
ಆರ್ಜೆಡಿ ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರು ಈ ವೇಳೆ ರೈಲು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ರೈಲು ಮುಂದೆ ಚಲಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ 25ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ರೈಲ್ವೆ ಟ್ರ್ಯಾಕ್ನಿಂದ ಹೊರಗೆ ಬಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮಂಜು ಆವರಿಸಿದ್ದ ಕಾರಣದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ರೈಲು ಚಾಲಕನಿಗೆ ದೂರಕ್ಕೆ ಕಾಣಿಸಲಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ಪಕ್ಷದ ನಳಂದಾ ಜಿಲ್ಲೆಯ ನಾಯಕ ಅಶೋಕ್ ಕುಮಾರ್ ಸುಮನ್, ಇದು ರೈಲ್ವೆ ಇಲಾಖೆಯಿಂದಾದ ಅಮಾನವೀಯ ವರ್ತನೆ ಎಂದು ಕಿರಿಕಾರಿದ್ದಾರೆ.
ನಂತರ ಆರ್ಜೆಡಿ ಕಾರ್ಯಕರ್ತರು ಮತ್ತೊಂದು ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.