ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಕರ್ನಲ್ ಸೇರಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡ ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ.
ಉಗ್ರರು ಭಾರತೀಯ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆ ನಡೆದಿದೆ. ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು, ಓರ್ವ ಲ್ಯಾನ್ಸ್ ನಾಯ್ಕ್, ರೈಫಲ್ ಮ್ಯಾನ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುತಾತ್ಮರಾದವರು.
ಗಡಿಯಲ್ಲಿ ಒಳನುಸುಳುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೀರೋ ಎಂದು ಗುರುತಿಸಿಕೊಂಡಿದ್ದ ಆಶುತೋಷ್ ಶರ್ಮಾ 21 ರಾಷ್ಟ್ರೀಯ ರೈಫಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇವರ ಕೂಡುಗೆ ಮಹತ್ವದ್ದಾಗಿತ್ತು.
ಯೋಧರ ಮೃತದೇಹಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಡಗಿ ಕುಳಿತ ಉಗ್ರರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.
ಕಳೆದ ಕೆಲ ದಿನಗಳಿಂದ ಗಡಿ ಪ್ರದೇಶದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದೆ. ಭಾರತೀಯ ಸೇನೆ ಇದಕ್ಕೆ ತಕ್ಕ ಉತ್ತರ ನೀಡುತ್ತಿದೆ. ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.