ತಿರುವನಂತಪುರಂ(ಕೇರಳ): ಕೊರೊನಾ ವೈರಸ್ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವುದರಿಂದ, ರಾಜ್ಯದಲ್ಲಿ ಸಮುದಾಯ ಹಂತ ತಲುಪಿದೆಯೇ? ಎಂದು ಪರಿಶೀಲಿಸಲು ಕೇರಳ ಸರ್ಕಾರ ಸೋಮವಾರದಿಂದ ಪ್ರತಿಕಾಯ (antibody) ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಕೇರಳದಲ್ಲಿ ಶುಕ್ರವಾರ 111 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದು ಒಂದೇ ದಿನದ ಗರಿಷ್ಠ ಏರಿಕೆಯಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಸ್ಥಿತಿ ಕೆಟ್ಟದಾಗಿದೆ ಎಂದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸಮುದಾಯ ಹಂತದಲ್ಲಿ ಹರಡುತ್ತಿದೆಯೇ ಎಂದು ಪರಿಶೀಲಿಸಲು ದೊಡ್ಡ ಪ್ರಮಾಣದಲ್ಲಿ ಪ್ರತಿಕಾಯ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಜೂನ್ 8 ರಿಂದ ಪರೀಕ್ಷೆ ಪ್ರಾರಂಭವಾಗಲಿವೆ ಎಂದು ಆರೋಗ್ಯ ಕಾರ್ಯದರ್ಶಿ ಡಾ.ರಾಜನ್ ಖೋಬರಗಡೆ ಹೇಳಿದ್ದಾರೆ. ಐಸಿಎಂಆರ್ ಮೂಲಕ ರಾಜ್ಯವು 14,000 ಕಿಟ್‌ಗಳನ್ನು ಪಡೆದಿದೆ ಮತ್ತು ಇವುಗಳಲ್ಲಿ 10,000 ಕಿಟ್‌ಗಳನ್ನು ವಿವಿಧ ಜಿಲ್ಲೆಗಳಿಗೆ ನೀಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಇನ್ನೂ 40,000 ಕಿಟ್‌ಗಳು ಬರುವ ನಿರೀಕ್ಷೆ ಇದೆ ಎಂದು ಸಿಎಂ ಹೇಳಿದ್ದಾರೆ.
ಸಮುದಾಯದ ಹರಡುವಿಕೆಯನ್ನು ಪರಿಶೀಲಿಸಲು ವಾರಕ್ಕೆ 15,000 ಪ್ರತಿಕಾಯ ಪರೀಕ್ಷೆ ನಡೆಸುವ ಯೋಜನೆ ಇದೆ. ಯಾರದಾದರೂ ಪ್ರತಿಕಾಯ ಪರೀಕ್ಷೆ ಸಕಾರಾತ್ಮಕವಾಗಿದ್ದರೆ, ಸೋಂಕನ್ನು ದೃಢೀಕರಿಸಲು ಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ, ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವುದು ದೊಡ್ಡ ಸವಾಲಾಗಿದೆ ಎಂದು ಸರ್ಕಾರಕ್ಕೂ ತಿಳಿದಿದೆ. ಜೂನ್ ತಿಂಗಳಲ್ಲಿ ವಿದೇಶದಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಜ್ಯಕ್ಕೆ ಬರುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.