ರಾಂಪುರ್ (ಉತ್ತರ ಪ್ರದೇಶ):ಕಳೆದ ವಾರ ಉತ್ತರಪ್ರದೇಶದ ರಾಂಪುರ್ ಮತ್ತು ಗೋರಖ್‌ಪುರದಲ್ಲಿ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದ 60ಕ್ಕೂ ಹೆಚ್ಚು ಜನರನ್ನು ಗುರುತಿಸಿ ನೋಟಿಸ್ ಜಾರಿಗೊಳಿಸಿದ್ದು, ಹಾನಿಗೆ ಪರಿಹಾರವನ್ನು ನೀಡುವಂತೆ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಂಪುರ್ ಜಿಲ್ಲೆಯಾದ್ಯಂತ ಸುಮಾರು 25 ಲಕ್ಷ ರೂಪಾಯಿಯಷ್ಟು ಹಾನಿಯನ್ನು ಪೊಲೀಸರು ಮತ್ತು ಜಿಲ್ಲಾಡಳಿತ ಅಂದಾಜು ಮಾಡಿದ್ದು, 28 ಜನರಿಗೆ ನೋಟಿಸ್ ಜಾರಿಗೊಳಿಸಿದೆ. ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ನಡೆಸಿದವರನ್ನು ಗುರುತಿಸಲಾಗಿದ್ದು 28 ಜನರಿಗೆ ನೋಟಿಸ್ ನೀಡಲಾಗಿದೆ. ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು? ಎಂದು ಕೇಳಲಾಗಿದ್ದು ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳ ನಾಶಕ್ಕಾಗಿ ಅವರಿಂದ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಂಪುರ್ ಜಿಲ್ಲಾಧಿಕಾರಿ ಆಂಜನೇಯ ಸಿಂಗ್ ಹೇಳಿದ್ದಾರೆ.