ಪ್ರಕಾಶಂ (ಆಂಧ್ರಪ್ರದೇಶ): ಆಸ್ಪತ್ರೆಗೆ ಕರೆದೊಯ್ಯುವಾಗ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಒಂಗೋಲ್ ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ರಮೇಶ್ (ಎಎಸ್ಐ) ತಿಳಿಸಿದ್ದಾರೆ
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವೃತ್ತಿಯಲ್ಲಿ ಚಮ್ಮಾರನಾಗಿರುವ ರೌಡಿ ಶೀಟರ್ ನೆಲಾಟೂರಿ ಸುರೇಶ್ ಎಂಬಾಂತ ಬುಧವಾರ ಮುಂಜಾನೆ 2:45 ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ಕೈಯಿಂದ ಠಾಣೆಯ ಗಾಜುಗಳನ್ನು ಒಡೆದು ಗಾಯ ಮಾಡಿಕೊಂಡಿದ್ದ. ಇದರಿಂದ ಅತನ ಕೈಗೆ ಗಾಯಗಳಾಗಿ ರಕ್ತ ಸುರಿಯುತ್ತಿತ್ತು. ಹೀಗಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು 108 ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಿತ್ತಿದ್ದರು. ಈ ವೇಳೆ ಆತ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ್ದ.
ಗಾಯಗೊಂಡಿದ್ದ ಸುರೇಶ್ನನ್ನು ಆ್ಯಂಬುಲೆನ್ಸ್ಗೆ ಹತ್ತಿಸಿ ಪೊಲೀಸರು ಹಿಂದಿನಿಂದ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಸುರೇಶ್ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಆ್ಯಂಬುಲೆನ್ಸ್ ಬಾಗಿಲು ತೆರೆದ ಪೊಲೀಸರು ಆತನನ್ನು ಸೆರೆ ಹಿಡಿದ್ದಿದ್ದಾರೆ ಎಂದು ಎಎಸ್ಐ ರಮೇಶ್ ತಿಳಿಸಿದ್ದಾರೆ.
ಘಟನೆ ನಡೆದಾಗ ಆ್ಯಂಬುಲೆನ್ಸ್ ಚಾಲಕ ಮತ್ತು ಸಹಾಯಕ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹಚ್ಚಿದ್ದ ಆರೋಪಿ ಸುರೇಶ್ನನ್ನು ಬೈಕ್ನಲ್ಲಿ ಕರೆದೊಯ್ದ ಪೊಲೀಸರು ಒಂಗೋಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸ್ ಠಾಣೆಗೆ ಹಾನಿ ಮಾಡಿದ್ದಕ್ಕಾಗಿ ಮತ್ತು ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ್ದಕ್ಕಾಗಿ ಸುರೇಶ್ ವಿರುದ್ಧ ಎರಡು ಪ್ರಕರಣ ದಾಖಲಿಸಲಾಗಿದೆ.