ಕೋಲ್ಕತ್ತಾ: ಕೊರೊನಾ ಸೋಂಕಿತ ಇಬ್ಬರು ಸಹೋದರರನ್ನು ಒಂದು ಆಸ್ಪತ್ರೆಯಿಂದ 6 ಕಿ.ಮೀ ದೂರದಲ್ಲಿರುವ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಚಾಲಕ 9,200 ರೂ. ಬೇಡಿಕೆಯಿಟ್ಟಿದ್ದಾನೆ.
ಸೋಂಕಿತರನ್ನು 6 ಕಿಮೀ ದೂರದ ಆಸ್ಪತ್ರೆಗೆ ಕರೆದೊಯ್ಯಲು 9 ಸಾವಿರ ಕೇಳಿದ ಆ್ಯಂಬುಲೆನ್ಸ್ ಚಾಲಕ
ಕೋವಿಡ್ ಸೋಂಕಿತ ಬಾಲಕರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಚಾಲಕ ಅಧಿಕ ಮೊತ್ತದ ಹಣ ಬೇಡಿಕೆಯಿಟ್ಟಿದ್ದಲ್ಲದೇ ಹೀನಾಯವಾಗಿ ನಡೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮಕ್ಕಳ ಆರೋಗ್ಯ ಸಂಸ್ಥೆ (ICH)ಯಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ 9 ತಿಂಗಳ ಗಂಡು ಮಗು ಹಾಗೂ 9 ವರ್ಷದ ಆತನ ಅಣ್ಣನಿಗೆ ಸೋಂಕು ತಗುಲಿತ್ತು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲು ಮುಂದಾದಾಗ ಆ್ಯಂಬುಲೆನ್ಸ್ ಡ್ರೈವರ್ 9,200 ರೂ. ಕೊಡುವಂತೆ ಹೇಳಿದ್ದಾನೆ. ನನ್ನ ಬಳಿ ಅಷ್ಟೊಂದು ಹಣ ಇಲ್ಲೆವೆಂದು ಹೇಳಿದರೂ ಆತ ಗಮನ ನೀಡಲಿಲ್ಲ ಎಂದು ಬಾಲಕರ ತಂದೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ನನ್ನ ಕಿರಿಯ ಮಗನಿಗೆ ನೀಡಿದ್ದ ಆಕ್ಸಿಜನ್ ಪೂರೈಕೆಯನ್ನು ನಿಲ್ಲಿಸಿ, ಆ್ಯಂಬುಲೆನ್ಸ್ ಒಳಗೆ ಕುಳಿತಿದ್ದ ನನ್ನ ಪತ್ನಿಯನ್ನು ಹೊರಹಾಕಿದ್ದಾನೆ. ಬಳಿಕ ವೈದ್ಯರು ಮಧ್ಯ ಪ್ರವೇಶಿ ಚರ್ಚಿಸಿ 2000 ರೂ.ಗೆ ತೆಗೆದುಕೊಳ್ಳುವಂತೆ ಚಾಲಕನಿಗೆ ಸೂಚಿಸಿದ್ದು, ಇದಕ್ಕಾಗಿ ಐಸಿಎಚ್ ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.