ನವದೆಹಲಿ: ಭಾರತದ ಉತ್ತರ ಭಾಗಗಳಲ್ಲಿ ಇಂದು ಬೆಳಗ್ಗೆ 10:25ರಿಂದ ಸೂರ್ಯಗ್ರಹಣ ಗೋಚರಿಸಲಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿ ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್ ಯುಟ್ಯೂಬ್, ಫೇಸ್ಬುಕ್ ಮತ್ತು ಜೂಮ್ ಮೂಲಕ ಸೂರ್ಯಗ್ರಹಣವನ್ನು ನೇರ ಪ್ರಸಾರ ಮಾಡಲಿದೆ.
ಇಂದು ಸಂಭವಿಸಲಿರುವ ಸೂರ್ಯ ಗ್ರಹಣದಲ್ಲಿ ಸೂರ್ಯ ಬೆಂಕಿಯ ಉಂಗುರದಂತೆ ಗೋಚರಿಸಲಿದೆ. ಚಂದ್ರನು ಸೂರ್ಯನನ್ನು ಉಂಗುರ ರೂಪಿಸುವ ರೀತಿಯಲ್ಲಿ ಆವರಿಸುತ್ತದೆ.
ರಾಜಸ್ಥಾನದ ಸೂರತ್ಗರ್ ಮತ್ತು ಅನುಪ್‌ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದಲ್ಲಿ ಕೇವಲ ಒಂದು ನಿಮಿಷದವರೆಗೆ ಸೂರ್ಯ 'ಬೆಂಕಿಯ ಉಂಗುರದಂತೆ' ಕಾಣಿಸಲಿದೆ. ಈ ಸೂರ್ಯಗ್ರಹಣವು ಆಫ್ರಿಕಾ, ಏಷ್ಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ.
ಬೆಳಿಗ್ಗೆ 10:25ಕ್ಕೆ ಆರಂಭಗೊಳ್ಳುವ ಗ್ರಹಣ ಮಧ್ಯಾಹ್ನ 1:54ಕ್ಕೆ ಕೊನೆಗೊಳ್ಳಲಿದೆ. ಬರಿಗಣ್ಣಿನಿಂದ ಸೂರ್ಯನನ್ನು ನೇರವಾಗಿ ನೋಡಬೇಡಿ. ಎಕ್ಸರೆ ಫಿಲ್ಮ್ ಹಾಗೂ ಸಾಮಾನ್ಯ ಸನ್ಗ್ಲಾಸ್ ಮೂಲಕ ಗ್ರಹಣ ವೀಕ್ಷಿಸಬೇಡಿ. ಗ್ರಹಣವನ್ನು ನೋಡಲು ಪೈಂಟ್ ಬಳಿದಿರುವ ಗಾಜು ಬಳಸಬೇಡಿ. ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯಕಾರಿ. ಬದಲಿಗೆ ಸೋಲಾರ್ ಕನ್ನಡಕ ಮತ್ತು ವೆಲ್ಡರ್ ಗ್ಲಾಸ್-14 ಗಳನ್ನು ಬಳಸಿ ನೋಡುವುದು ಕಣ್ಣಿಗೆ ಸುರಕ್ಷಿತವಾಗಿದೆ.