ಅಲೀಗಢ (ಉತ್ತರ ಪ್ರದೇಶ) :ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ಯುವಕ ಸಾವನ್ನಪ್ಪಿದ್ದರಿಂದ ಉದ್ವಿಗ್ನಗೊಂಡಿದ್ದ ಇಲ್ಲಿನ ಓಲ್ಡ್ ಸಿಟಿ ಯಥಾಸ್ಥಿತಿಗೆ ಮರಳಿದ್ದು, ಮತ್ತೆ ವ್ಯಾಪಾರ ವಹಿವಾಟುಗಳು ಎಂದಿನಂತೆ ಪ್ರಾರಂಭಗೊಂಡಿದೆ.
ಉದ್ವಿಗ್ನಗೊಂಡಿದ್ದ ಅಲೀಗಢ ಮತ್ತೆ ಯಥಾಸ್ಥಿತಿಗೆ: ವ್ಯಾಪಾರ ವಹಿವಾಟು ಪುನಾರಂಭ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಯುವಕ ಸಾವನನ್ನಪ್ಪಿದ ಹಿನ್ನೆಲೆ ಕಳೆದರಡು ದಿನಗಳಿಂದ ಉದ್ವಿಗ್ನಗೊಂಡಿದ್ದ ಅಲೀಗಢ ಓಲ್ಡ್ ಸಿಟಿ ಮತ್ತೆ ಯಥಾಸ್ಥಿತಿ ಮರಳಿದೆ. ಹೀಗಾಗಿ ಅಂಗಡಿ, ಮುಂಗಟ್ಟುಗಳು ಮತ್ತೆ ತೆರೆದಿದ್ದು, ವ್ಯಾಪಾರ, ವಹಿವಾಟು ಪ್ರಾರಂಭವಾಗಿದೆ.
ಫೆ.23ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಮೊಹಮ್ಮದ್ ತಾರಿಕ್ (22), ಕಳೆದ ಶುಕ್ರವಾರ ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯ(ಎಎಂಯು)ದ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದ. ಇದರಿಂದ ಕಳೆದೆರಡು ದಿನಗಳಿಂದ ಅಪ್ಪರ್‌ಕೋಟ್, ಬಾಬರಿ ಮಂಡಿ ಮತ್ತು ತುರ್ಕಮನ್ ಗೇಟ್ ಪ್ರದೇಶಗಳಲ್ಲಿನ ಅಂಗಡಿಗಳು ಮತ್ತು ವ್ಯಾಪಾರ ಮಳಿಗೆಗಳು ಎರಡು ದಿನಗಳಿಂದ ಮುಚ್ಚಲ್ಪಟ್ಟಿದ್ದವು. ಓಲ್ಡ್ ಸಿಟಿಯ ಸೂಕ್ಷ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಮತ್ತೆ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೀಗಢ ವಿಭಾಗದ ಡಿಐಜಿ ಪ್ರೀತೇಂದ್ರ ಸಿಂಗ್, ಮುನ್ನೆಚ್ಚರಿಕಾ ಕ್ರಮವಾಗಿ ಬಂದೋಬಸ್ತ್ ಮುಂದುವರೆಸಲಾಗುವುದು. ಉದ್ವಿಗ್ನತೆಯನ್ನು ಹತೋಟಿಗೆ ತರುವಲ್ಲಿ ಮೃತ ತಾರಿಕ್ ಕುಟುಂಬಸ್ಥರ ಸಹಕಾರ ಶ್ಲಾಘನೀಯ ಎಂದಿದ್ದಾರೆ.