ಆಗ್ರಾ (ಉತ್ತರಪ್ರದೇಶ): ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯ ಆರೋಗ್ಯಾಧಿಕಾರಿಯನ್ನು ಮುಕೇಶ್ ವತ್ಸ್ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎ.ಕೆ. ಮಿತ್ತಲ್ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಇವರ ಜಾಗಕ್ಕೆ ಆರ್.ಸಿ.ಪಾಂಡೆ ಹಾಗೂ ಅವಿನಾಶ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಕಳಪೆ ಆರೋಗ್ಯ ಸೇವೆಗಳ ವಿರುದ್ಧ ಅಸಮಾಧಾನ, ವಿವಿಧ ಇಲಾಖೆಗಳ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಹಾಗೂ ಕೊರೊನಾ ವಿರುದ್ಧ ಹೋರಾಡಲು ನೆರವಾಗುವಂತೆ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳನ್ನು ಆಗ್ರಾಗೆ ಕಳಹಿಸಿತ್ತು. ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಮತ್ತು ಐಜಿ ಪೊಲೀಸ್ ವಿಜಯ್ ಕುಮಾರ್ ಆಗ್ರಾಗೆ ಬಂದು ಪರಿಶೀಲನೆ ನಡೆಸಿದ್ದರು. ಈ ವೇಳೆ ಕೆಲವು ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಮಹತ್ತರವಾದ ನಿರ್ಣಯ ತೆಗೆದುಕೊಳ್ಳಲಾಗಿದೆ.
ಆಗ್ರಾದಲ್ಲಿ ಇದುವರೆಗೆ 25 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು 752 ಸೋಂಕಿತರು ಪತ್ತೆಯಾಗಿದ್ದು, ಇವರಲ್ಲಿ 325 ಮಂದಿ ಸೋಂಕಿತರು ಸೋಂಕಿನಿಂದ ಗುಣಮುಖ ಹೊಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿ ಒಟ್ಟು 44 ಹಾಟ್ಸ್ಪಾಟ್ಗಳನ್ನು ಗುರುತಿಸಲಾಗಿದ್ದು, 9 ಸಾವಿರ ಸ್ಯಾಂಪಲ್ಗಳ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿ.ಎನ್.ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಆಗ್ರಾದ ಕೆಲವು ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದ ಅಲ್ಲಿನ ಪರಿಸ್ಥಿತಿ ಉತ್ತಮವಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಅದರಲ್ಲೂ ಹಾಟ್ಸ್ಪಾಟ್ಗಳಲ್ಲಿ ಪೊಲೀಸರು ಜನರನ್ನು ನಿಯಂತ್ರಿಸುತ್ತಿಲ್ಲ ಎಂಬ ಆರೋಪ ಕೂಡಾ ಕೇಳಿಬರುತ್ತಿದೆ.
ಕೊರೊನಾ ನಿಯಂತ್ರಣಕ್ಕೆ ತರಲು ಹಲವಾರು ಸ್ವಯಂಸೇವಾ ಸಂಸ್ಥೆಗಳೂ ದುಡಿಯುತ್ತಿವೆ. ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ಸರಕುಗಳನ್ನು ಹಾಗೂ ವೈದ್ಯಕೀಯ ನೆರವು ನೀಡುತ್ತಿವೆ.