ಅಮರಾವತಿ:ಬಾಲಿವುಡ್ ನಟ ಸೋನು ಸೂದ್ ಆಂಧ್ರದ ಬಡ ರೈತನ ಕುಟುಂಬಕ್ಕೆ ಟ್ರ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಬೆನ್ನಲ್ಲೇ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆ ರೈತನ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ತೂರು ಜಿಲ್ಲೆಯ ಬಡ ರೈತ ನಾಗೇಶ್ವರ ರಾವ್ ಅವರ ಕುಟುಂಬಕ್ಕೆ ಟ್ರ್ಯಾಕ್ಟರ್ ಕಳುಹಿಸಿ ಸ್ಪೂರ್ತಿದಾಯಕ ಕಾರ್ಯ ಮಾಡಿದ್ದಾರೆ. ಈ ಕುಟುಂಬದ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳಲು ಮತ್ತು ಅವರ ಕನಸುಗಳನ್ನು ಈಡೇರಿಸಲು ಸಹಾಯ ಮಾಡಲು ನಾನು ನಿರ್ಧರಿಸಿದ್ದೇನೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.
ನಾಯ್ಡು ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು ಸರ್. ನಿಮ್ಮ ನಡೆಯು ಪ್ರತಿಯೊಬ್ಬರು ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಚಿತ್ತೂರು ಜಿಲ್ಲೆಯ ಕೆ. ಮಹಲ್ ರಾಜಪಲ್ಲಿ ಮಂಡಲದ ರೈತ ನಾಗೇಶ್ವರ ರಾವ್ ಅವರ ಇಬ್ಬರು ಹೆಣ್ಣುಮಕ್ಕಳು ಎತ್ತುಗಳ ಬದಲಿಗೆ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ವಿಷಾದ ವ್ಯಕ್ತಪಡಿಸಿದ್ದ ನಟ ಸೋನು ಸೂದ್, "ಈ ಕುಟುಂಬಕ್ಕೆ ಬೇಕಾಗಿರುವುದು ಎತ್ತುಗಳಲ್ಲ, ಟ್ರ್ಯಾಕ್ಟರ್. ಹೀಗಾಗಿ ಇವರ ಮನೆಗೆ ಟ್ರ್ಯಾಕ್ಟರ್ ಕಳುಹಿಸುತ್ತಿದ್ದೇನೆ. ಸಂಜೆಯ ಒಳಗಡೆ ನಿಮ್ಮ ಗದ್ದೆಯನ್ನು ಟ್ರ್ಯಾಕ್ಟರ್ ಉಳುಮೆ ಮಾಡಲಿದೆ" ಎಂದು ಟ್ವೀಟ್ ಮಾಡಿದ್ದರು. ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ್ದು, ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.