ನವದೆಹಲಿ: ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಿಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನಾಳೆ ರಾಷ್ಟ್ರವ್ಯಾಪಿ ಬ್ಲಾಕ್ ಡೇ ಆಚರಿಸಲು ಕರೆ ನೀಡಿದ್ದು, ಗೃಹ ಅಮಿತ್ ಶಾ ಈ ಬಗ್ಗೆ ಮಾತುಕತೆ ನಡೆಸಿದ ನಂತರ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಐಎಂಎ ತಿಳಿಸಿದೆ.
ಶಾ ಆಶ್ವಾಸನೆಗೆ ಕರಗಿದ ವೈದ್ಯರು: ಪ್ರತಿಭಟನೆ ಹಿಂಪಡೆದ ಐಎಂಎ - ಪ್ರತಿಭಟನೆಯನ್ನು ಹಿಂಪಡೆದಿದೆ
ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆಯಿಂದಾಗಿ ಗುರುವಾರದಂದು ಬ್ಲಾಕ್ ಡೇ ಆಚರಿಸಲು ತೀರ್ಮಾನಿಸಿದ್ದ ಐಎಂಎ, ಗೃಹ ಸಚಿವ ಅಮಿತ್ ಶಾ ಮನವಿಗೆ ಸ್ಪಂದಿಸಿದ್ದು, ಪ್ರತಿಭಟನೆ ಹಿಂಪಡೆದಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ವೈದ್ಯರು ಹಾಗೂ ಇತರ ಆರೋಗ್ಯ ಇಲಾಖಾ ಸಿಬ್ಬಂದಿ ಮೇಲೆ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಐಎಂಎ ಎಲ್ಲ ಆಸ್ಪತ್ರೆಗಳಲ್ಲೂ ಗುರುವಾರದಂದು ಬ್ಲಾಕ್ ಡೇ ಆಚರಿಸಲು ಕರೆ ನೀಡಿತ್ತು. ಇದರಿಂದ ಎಚ್ಚೆತ್ತ ಕೇಂದ್ರ ಸರ್ಕಾರ, ಇಂದು ಐಎಂಎ ವೈದ್ಯರೊಂದಿಗೆ ಗೃಹ ಸಚಿವ ಅಮಿತ್ ಶಾ ಹಾಗೂ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದರು.
ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ನೀಡಲು ಒಪ್ಪಿರುವ ಹಿನ್ನೆಲೆ, ಐಎಂಎ ಪ್ರಸ್ತಾಪಿಸಿದ್ದ ಸಾಂಕೇತಿಕ ಪ್ರತಿಭಟನೆಯನ್ನು ಮಾಡದೇ ತಮ್ಮ ಕಾರ್ಯಗಳನ್ನು ಎಂದಿನಂತೆ ಮುಂದುವರೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.