ಯಾವುದೇ ಕೋನದಿಂದ ನೋಡಿದರೂ ಈಗಿನ ರಾಜಕೀಯ ಸಂಪೂರ್ಣವಾಗಿ ಭ್ರಷ್ಟರಿಂದ ತುಂಬಿ ಹೋಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ರಾಜಕೀಯ ನಾಯಕರು ಈಗ ಚುನಾವಣೆ ಸಮಯದಲ್ಲಾಗಲೀ ಅಥವಾ ನಂತರದಲ್ಲಾಗಲೀ ಮಾಡುವ ಯಾವ ಭರವಸೆಗಳಿಗೂ ತಲೆ ಬುಡ ಇರುವುದಿಲ್ಲ. ಈ ಭರವಸೆಗಳನ್ನು ಈ ನೆಲದ ಸಂವಿಧಾನ ಹಾಗೂ ಕಾನೂನುಗಳಿಗೆ ಅನುಗುಣವಾಗಿ ಈಡೇರಿಸುವ ನಂಬಿಕೆಯೂ ಜನರಲ್ಲಿ ಇರುವುದಿಲ್ಲ. ಇದರಲ್ಲಿ ಅವರು ಯಾವ ತಾರತಮ್ಯ ಮಾಡುವುದಿಲ್ಲ, ಅನ್ಯ ಉದ್ದೇಶವನ್ನು ಹೊಂದಿರುವುದಿಲ್ಲ ಎಂಬ ನಂಬಿಕೆಯೂ ಜನರಲ್ಲಿ ಇರುವುದಿಲ್ಲ.
ಭ್ರಷ್ಟಾಚಾರ ನಿಗ್ರಹ ದಳವಂತೂ ಅವರ ಕೈಯಲ್ಲೇ ಇದೆ. ಮಾತು ಬದಲಿಸುವವರೆಂದರೆ ರಾಜಕೀಯ ನಾಯಕರು ಎಂಬುದು ಸಾಮಾನ್ಯ ಜನರಿಗೂ ತಿಳಿದುಹೋಗಿದೆ. ಇದಕ್ಕೆ ಪೂರಕವಾಗಿ ಈಗ ಭ್ರಷ್ಟಾಚಾರ ನಿಗ್ರಹ ದಳಗಳೂ ತಮ್ಮ ನಿಲುವು ಬದಲಿಸುತ್ತಿವೆ. ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳವು ತಮ್ಮ ರಾಜಕೀಯ ನಾಯಕ ಬದಲಾಗುದ್ದಂತೆ ಕೋರ್ಟ್‌ನಲ್ಲಿ ಹೇಳಿಕೆಯನ್ನೂ ಬದಲಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಜಲ ಸಂಪನ್ಮೂಲ ಯೋಜನೆಗಳನ್ನು ನೀಡುವಲ್ಲಿ ಅಪಾರ ಪ್ರಮಾಣದ, ಅಂದರೆ 70,000 ಕೋಟಿ ರೂ. ಮೌಲ್ಯದ ಹಗರಣದ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಈ ಅಕ್ರಮದಲ್ಲಿ ಅಜಿತ್ ಪವಾರ್ ಪಾತ್ರ ಯಾವ ಮಟ್ಟಿಗೆ ಇದೆ ಎಂಬುದನ್ನು ಕಂಡುಕೊಳ್ಳುವಂತೆ ಎಸಿಬಿಗೆ ಬಾಂಬೆ ಹೈಕೋರ್ಟ್ ಈಗಾಗಲೇ ಆದೇಶ ನೀಡಿತ್ತು. ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಕಳೆದ ವರ್ಷದ ನವೆಂಬರ್‌ನ ಕೊನೆಯ ವಾರದಲ್ಲಿ ಎಸಿಬಿ ತನ್ನ ಅಫಿಡವಿಟ್ ಸಲ್ಲಿಸಿತ್ತು. ಈ ಅಫಿಡವಿಟ್‌ನಲ್ಲಿ ‘ಕಾಂಗ್ರೆಸ್ ಮತ್ತು ಎನ್‌ಸಿಪಿ ನೇತೃತ್ವದ ಸರ್ಕಾರದಲ್ಲಿ ಅತಿ ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಿದ ಜಲ ಸಂಪನ್ಮೂಲ ಸಚಿವರೇ ಈ ಹಗರಣಕ್ಕೆ ನೇರ ಹೊಣೆಯಾಗುತ್ತಾರೆ ಎಂಬುದಾಗಿ ಮಹಾರಾಷ್ಟ್ರ ಸರ್ಕಾರದ ಸಾಮಾನ್ಯ ಆಡಳಿತ ನಿಯಮಗಳ 10ನೇ ನಿಬಂಧನೆ ಹೇಳುತ್ತದೆ’ ಎಂದು ಎಸಿಬಿ ಪ್ರಮುಖವಾಗಿ ಉಲ್ಲೇಖಿಸಿತ್ತು.
ನೀರಾವರಿ ಯೋಜನೆಗಳಲ್ಲಿ ಎಲ್ಲ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಾರ್ಯದರ್ಶಿಗಳು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಕರ್ತವ್ಯ ಎಂಬ ನಿಲುವನ್ನು ಅಜಿತ್ ಪವಾರ್ ವ್ಯಕ್ತಪಡಿಸುತ್ತಿದ್ದಾರೆ. ಗುತ್ತಿಗೆಗಳು ಹಾಗೂ ಮುಂಗಡ ಪಾವತಿಗೆ ಸಂಬಂಧಿಸಿದ ಎಲ್ಲ ಫೈಲ್‌ಗಳಿಗೂ ಅಜಿತ್ ಪವಾರ್ ಅವರೇ ಸಹಿ ಮಾಡಿದ್ದಾರೆ ಎಂಬುದಾಗಿ ಕೋರ್ಟ್‌ನಲ್ಲಿ ಎಸಿಬಿ ಈ ಹಿಂದೆ ಹೇಳಿತ್ತು.
ಇದೇ ರೀತಿ, ಅವ್ಯವಹಾರದಲ್ಲಿ ಜವಾಬ್ದಾರರಾಗಿರುವ ಮತ್ತು ಸರ್ಕಾರಕ್ಕೆ ಭಾರಿ ನಷ್ಟ ಉಂಟು ಮಾಡಿರುವ ಎಲ್ಲರೂ ಈಗ ತಮ್ಮ ಹೊಣೆಯನ್ನು ಇತರರ ಮೇಲೆ ಹೊರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಸಿಬಿ ಕೋರ್ಟ್‌ನಲ್ಲಿ ವಾದಿಸಿತ್ತು. ಈ ಮೂಲಕ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲರೂ ನಿಯಮ ಮತ್ತು ನೀತಿಗಳ ಆಸರೆ ಪಡೆದುಕೊಂಡು ಬಚಾವಾಗುತ್ತಿದ್ದಾರೆ ಎಂಬುದು ಎಸಿಬಿ ವಾದವಾಗಿತ್ತು. ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶವೇ ಜಲ ಸಂಪನ್ಮೂಲ ಸಚಿವಾಲಯಕ್ಕೆ ಇತ್ತು. ಈ ಉದ್ದೇಶದಿಂದಲೇ ಸಂಚು ಹೂಡಲಾಗಿತ್ತು ಎಂದು ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಎಸಿಬಿ ಹೇಳಿದೆ. ಆದರೆ, ಒಂದೇ ವರ್ಷದಲ್ಲಿ ತನ್ನ ನಿಲುವನ್ನೇ ಎಸಿಬಿ ಹೇಗೆ ಬದಲಿಸಿದೆ ಎಂದು ನೋಡಿ!
ಕೋರ್ಟ್‌ನಲ್ಲಿ ಎಸಿಬಿ ಪ್ರತಿನಿಧಿಸಿದ ಎಸ್‌ಪಿ 16 ಪುಟಗಳ ಅಫಿಡವಿಟ್‌ನ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ, ಅದರ ಧ್ವನಿಯಲ್ಲಿ ಬದಲಾವಣೆಯಾಗಿದೆ. ವಿದರ್ಭ ಇರಿಗೇಶನ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ಗೆ ಜಲ ಸಂಪನ್ಮೂಲ ಸಚಿವರು ಮುಖ್ಯಸ್ಥರಾಗಿದ್ದಾರೆ. ಆದರೂ, ಎಕ್ಸಿಕ್ಯೂಟಿವ್ ಕಮಿಟಿ ಮಾಡಿದ ತಪ್ಪುಗಳಿಗೆ ಅವರನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಅವ್ಯವಹಾರಗಳ ಮೇಲೆ ಕಣ್ಣಿಡುವುದು ಇವರ ಜವಾಬ್ದಾರಿ ಅಲ್ಲವೇ ಅಲ್ಲ ಎಂದು ಅಫಿಡವಿಟ್‌ನಲ್ಲಿ ಎಸ್‌ಪಿ ಬರೆದಿದ್ದಾರೆ. ಇದೇ ಎಸಿಬಿ ಈ ಹಿಂದೆ ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಅಜಿತ್ ಪವಾರ್ ಕೂಡ ಒಳಗೊಂಡಿದ್ದಾರೆ ಎಂದು ಹೇಳಿತ್ತು.
ಆದರೆ, ಈಗ ತನ್ನ ನಿಲುವನ್ನೇ ಬದಲಿಸಿದೆ. ಅಜಿತ್ ಪವಾರ್ ಬದಲಿಗೆ ನೀರಾವರಿ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಪೊರೇಶನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಈ ಅವ್ಯವಹಾರಕ್ಕೆ ಕಾರಣ ಎನ್ನುತ್ತಿದೆ. ತನ್ನ ವಾದಕ್ಕೆ ಪೂರಕವಾಗಿ ತನ್ನ ವಾದವನ್ನೂ ಎಸಿಬಿ ಮಂಡಿಸಿದೆ. ಇದರಲ್ಲಿ ಹೆಚ್ಚಿನ ಬೆಲೆಗೆ ಗುತ್ತಿಗೆಗಳನ್ನು ನೀಡುವಂತೆ ಜಲ ಸಂಪನ್ಮೂಲ ಕಾರ್ಯದರ್ಶಿಗೆ ಅಜಿತ್ ಪವಾರ್ ಸೂಚಿಸಿದ್ದಾರೆ ಎಂಬುದಕ್ಕೆ ಯಾವ ದಾಖಲೆಯೂ ಇಲ್ಲ ಎಂದು ಹೇಳಿದೆ. ಎಸಿಬಿ ಸದ್ಯ 2654 ಟೆಂಡರ್‌ಗಳ ತನಿಖೆ ನಡೆಸುತ್ತಿದೆ.
ವಿದರ್ಭ ಇರಿಗೇಶನ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಅಡಿಯಲ್ಲಿ 45 ಪ್ರಾಜೆಕ್ಟ್‌ಗಳಿಗೆ ಈ ಟೆಂಡರ್‌ಗಳನ್ನು ಕರೆಯಲಾಗಿತ್ತು. ಈ ಪೈಕಿ 32 ನೀರಾವರಿ ಪ್ರಾಜೆಕ್ಟ್‌ಗಳಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ವಿಪರೀತ ವೆಚ್ಚ ಮಾಡಲಾಗಿದೆ. ಈ ಅವ್ಯವಹಾರದ ಮೊತ್ತ 17,700 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018 ನವೆಂಬರ್‌ನಿಂದ ಈವರಗೆ ತನಿಖೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ ಎಂಬುದನ್ನು ನಂಬಲೂ ಕಷ್ಟವಾಗುತ್ತಿದೆ. ಅಜಿತ್ ಪವಾರ್ ಅವರೇ ಈ ಅವ್ಯವಹಾರಕ್ಕೆ ಕಾರಣ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದ ಎಸಿಬಿ ನಂತರ ಅಜಿತ್ ಪವಾರ್ ನೇರ ಹೊಣೆಗಾರರಲ್ಲ ಎಂಬರ್ಥದಲ್ಲಿ ಅಫಿಡವಿಟ್ ಸಲ್ಲಿಸುವ ಮೂಲಕ ನಿಲುವು ಬದಲಿಸಿದ್ದಕ್ಕೆ ಕಾರಣ ತಿಳಿಯಲಾರದ್ದೇನಲ್ಲ. ಅಗತ್ಯ ಬಿದ್ದಾಗ ತನ್ನ ಬಣ್ಣವನ್ನು ಹೇಗೆ ಎಸಿಬಿ ಬದಲಿಸಬಹುದು ಎಂಬುದನ್ನು ತಿಳಿದವರಿಗೆ ಅಫಿಡವಿಟ್ ಅದಕ್ಕೆ ಅನುಗುಣವಾಗಿ ಬದಲಿಸಲಾಗಿದೆ ಎಂಬುದನ್ನು ಅರಿಯುವುದು ಕಷ್ಟದ ಸಂಗತಿಯೇನಲ್ಲ.