ನವದೆಹಲಿ: ದೆಹಲಿಯ ಫಲಿತಾಂಶ ನೂತನ ಇತಿಹಾಸ ಬರೆದಿದೆ. ಜೊತೆಗೆ ದೇಶಾದ್ಯಂತ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ. ಅದಕ್ಕೆ ಮತದಾರರು ಕಾರಣ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಈ ಫಲಿತಾಂಶ ಕೇವಲ ದೆಹಲಿಗೆ ಮಾತ್ರ ಸೀಮಿತವಲ್ಲ. ಇದು ದೇಶಕ್ಕೆ ಸಂದ ಜಯ. ನಾನು ಅಭಿವೃದ್ಧಿಯ ಹರಿಕಾರ. ಆದರೆ, ನನ್ನ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದರು. ಆದರೂ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ, ನನ್ನ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರ ಮನೆ ಮಾತಾಗಿದ್ದವು. ಹೀಗಾಗಿ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇತ್ತು ಎಂದು ಹೇಳಿದರು.
ಚುನಾವಣಾ ಫಲಿತಾಂಶದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 2015 ರಲ್ಲಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಾಗ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ. ದಿನದ 24 ಗಂಟೆಯೂ ನೀರು, ವಿದ್ಯುತ್ ನೀಡಲಾಗುತ್ತಿದೆ. ಅದನ್ನು ಈಗಲೂ ಮುಂದುವರಿಸುತ್ತೇವೆ. ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲ ಎಂದು ಮತದಾರರಿಗೆ ಭರವಸೆ ನೀಡಿದರು.
ಮಂಗಳವಾರವಾದ ಇಂದು ಅತ್ಯಂತ ಶುಭದಿನ. ಅಷ್ಟೇ ಅಲ್ಲ, ನನ್ನ ಪತ್ನಿ ಜನ್ಮದಿನವೂ ಸಹ. ಮತ್ತೊಂದೆಡೆ ಪಕ್ಷಕ್ಕೆ ಭರ್ಜರಿ ಗೆಲುವು. ಈ ಸಂತಸದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಂತೆ ಮಾಡಿದ ಕಾರ್ಯಕರ್ತರು, ಬೆಂಬಲಿಗರಿಗೆ ಹೃದಯಪೂರ್ವಕ ಧನ್ಯವಾದಗಳು. ಪಕ್ಷದ ಗೆಲುವಿಗೆ ಅವರು ಶ್ರಮಿಸಿದ್ದಾರೆ. ಹೀಗಾಗಿ ಎಷ್ಟು ಬಾರಿ ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 63 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಅತ್ತ ಬಿಜೆಪಿ ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಕಾಂಗ್ರೆಸ್ ಪಕ್ಷ ಖಾತೆ ತೆರೆಯದೆ ತೀವ್ರ ಮುಖಭಂಗ ಅನುಭವಿಸಿದೆ.