ಕರ್ನಾಟಕ

karnataka

ETV Bharat / bharat

ಬಾಕಿ ಸಂಬಳ ಕೇಳಿದ್ದೇ ತಪ್ಪಾಯ್ತಾ?. ಮಹಿಳೆಯನ್ನು ಅಮಾನುಷವಾಗಿ ಥಳಿಸಿ ಕೊಂದ ಮಾಲೀಕ..? - death

ಬಾಕಿ ಉಳಿದ ಸಂಬಳ ಕೇಳಿದ್ದಕ್ಕೆ 22 ವರ್ಷದ ಮಹಿಳೆಯನ್ನು ಥಳಿಸಿ ಕೊಲೆ ಮಾಡಿರುವ ಘಟನೆ ಗಾಜಿಯಾಬಾದ್​​ನಲ್ಲಿ ಸಂಭವಿಸಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ತನಿಖೆ ಮುಂದುವರೆಯಲಿದೆ.

ಮಹಿಳೆಯನ್ನು ಅಮಾನುಷವಾಗಿ ಥಳಿಸಿ ಕೊಂದ ಮಾಲೀಕ

By

Published : May 11, 2019, 7:51 PM IST

ಗಾಜಿಯಾಬಾದ್​( ಉತ್ತರಪ್ರದೇಶ):ಬಾಕಿ ಉಳಿದ ಸಂಬಳ ಕೇಳಿದ್ದಕ್ಕೆ ಮಾಲೀಕನೊಬ್ಬ 22 ವರ್ಷದ ಮಹಿಳೆಯನ್ನು ಥಳಿಸಿ ಕೊಲೆ ಮಾಡಿರುವ ಪ್ರಕರಣ ಉತ್ತರಪ್ರದೇಶದ ಗಾಜಿಯಾಬಾದ್​​ನಲ್ಲಿ ನಡೆದಿದೆ.

ನಗರದ ಅಂಬೇಡ್ಕರ್​ ರಸ್ತೆಯಲ್ಲಿರುವ ಸುಚಿತ್ರ ಕಾಂಪ್ಲೆಕ್ಸ್​ನಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಮೃತ ಮಹಿಳೆ ಸುಚಿತ್ರ ಕಾಂಪ್ಲೆಕ್ಸ್​ನಲ್ಲಿರುವ ರೆಫ್ರಿಜರೇಟರ್ ದುರಸ್ತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು. ಸ್ವಲ್ಪ ದಿನಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ ಈಕೆ ಬಾಕಿ ಉಳಿದ ಸಂಬಳ ಕೇಳಲು ಮಾಲೀಕನ ಬಳಿ ಬಂದಿದ್ದರು. ಆದರೆ, ಮಾಲೀಕನ ಮಗ ಆಕೆಯನ್ನು ಒಂದೇ ಸಮನೆ ಹೊಡೆಯಲಾರಂಭಿಸಿದ ಎನ್ನಲಾಗಿದೆ. ಹೀಗೆ ಥಳಿತಕ್ಕೊಳಗಾದ ಮಹಿಳೆ ಮೃತಪಟ್ಟಿದ್ದಾಳೆ.

ಪೊಲೀಸರ ವರದಿ ಪ್ರಕಾರ, ಮಹಿಳೆಯನ್ನು ಥಳಿಸಿರುವ ಆರೋಪಿ ಮಾಲಿಕನ ಮಗ ರೋಹಿತ್​ ಸಕ್ಸೇನಾ ಎಂದು ಗುರುತಿಸಲಾಗಿದೆ. ಜೊತೆಗೆ ಮಾಲೀಕ ಎಂ.ಕೆ ಸಕ್ಸೇನಾ ಕೂಡ ತನ್ನ ಮಗನೊಂದಿಗೆ ಸೇರಿ ಮಹಿಳೆಯನ್ನು ಥಳಿಸಿದ್ದಾನೆ. ನಂತರ ಆಕೆ ಅಸ್ವಸ್ಥಳಾಗಿ ಬಿದ್ದಿದ್ದು, ಆ ನಿರ್ಧಯಿಗಳು ಆಕೆಯ ಮುಖಕ್ಕೆ ಬಿಸಿನೀರು ಎರಚಿದ್ದಾರೆ.

ಸುಮಾರು 45 ನಿಮಿಷಗಳ ಕಾಲ ನಡೆದ ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೊಲೀಸರ ಸಹಕಾರದಿಂದ ಗಾಯಗೊಂಡ ಮಹಿಳೆಯನ್ನು ಎಂಎಂಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ. ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ವರದಿಯನ್ನು ಕಾಯ್ದಿರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಜೈ ಕರಣ್​ ಸಿಂಗ್​ ತಿಳಿಸಿದರು.

ಈ ಸಂಬಂಧ ಪೊಲೀಸರು ಆರೋಪಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ವಿಚಾರಣೆ ಬಾಕಿಯಿದ್ದು, ಇನ್ನೂ ಕೂಡ ಯಾರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.

ABOUT THE AUTHOR

...view details