ನಲ್ಗೊಂಡ(ತೆಲಂಗಾಣ):24 ಗಂಟೆಗಳ ಒಳಗಾಗಿಯೇ ಯುವತಿಯೊಬ್ಬಳು ಎರಡು ಮದುವೆಯಾದ ವಿಚಿತ್ರ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್ ಪ್ರಾಂತ್ಯದಲ್ಲಿ ನಡೆದಿದೆ.
ಕನಗಲ್ ಪ್ರಾಂತ್ಯದ ಶಾಬ್ದುಲ್ಲಾಪುರ ಗ್ರಾಮದಲ್ಲಿ ಮೋನಿಕಾ ಎಂಬ ಯುವತಿ ಜೂನ್ 12ರಂದು ಪೋಷಕರು ನೋಡಿದ ಯುವಕನೊಂದಿಗೆ ವಿವಾಹವಾದಳು. ಅದೇ ಸಮಯಕ್ಕೆ ಆಕೆ ಪ್ರೀತಿಸುತ್ತಿದ್ದ ಯುವಕ ರಾಜೇಶ್ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.
ರಾಜೇಶ್, ಮೋನಿಕಾಳ ಸಂಬಂಧಿಯಾಗಿದ್ದ. ಕಳೆದ ಕೆಲ ವರ್ಷಗಳಿಂದ ಈ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು. ಆದರೆ, ತಮ್ಮ ಪ್ರೀತಿಯ ವಿಷಯವನ್ನು ಪೋಷಕರಿಗೆ ತಿಳಿಸಲು ಮೋನಿಕಾ ಭಯಪಡುತ್ತಿದ್ದಳು. ಹೀಗಾಗಿ ಪೋಷಕರು ನೋಡಿದ ಯುವಕನೊಂದಿಗೆ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಳು. ಆದರೆ, ವಿವಾಹ ಸ್ಥಳಕ್ಕೆ ಎಂಟ್ರಿ ಕೊಟ್ಟ ರಾಜೇಶ್, ತಮ್ಮ ಪ್ರೀತಿಯ ವಿಷಯ ಬಹಿರಂಗ ಪಡಿಸಿದ್ದಾನೆ.
ಈ ವೇಳೆ ಮದುವೆ ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮತ್ತು ಕೆಲವು ಹಿರಿಯರು ಕುಳಿತು ಚರ್ಚೆ ನಡೆಸಿ, ಮದುವೆಯನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಮರು ದಿನವೇ ಪೋಷಕರೆಲ್ಲ ಸೇರಿ ರಾಜೇಶ್ ಮತ್ತು ಮೋನಿಕಾಳ ವಿವಾಹ ನಡೆಸಿದ್ದಾರೆ.