ಹೈದರಾಬಾದ್: ಐಪಿಸಿ ಅಧಿಕಾರಿಯೊಬ್ಬರ ಮೇಲೆ ಅವರ ಪತ್ನಿಯೇ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆಯ ಆಪಾದನೆಯಡಿ ದೂರು ದಾಖಲಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ತನ್ನ ಪತಿ ಐಪಿಎಸ್ ಅಧಿಕಾರಿ ಆಗಿದ್ದು, ವಿವಾಹ ವಿಚ್ಛೇದನ ನೀಡುವಂತೆ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ 28 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿ ಕೊಕ್ಕಂತಿ ಮಹೇಶ್ವರ ರೆಡ್ಡಿ ಎಂಬುವವರ ಮೇಲೆ ಈ ದೂರು ದಾಖಲಾಗಿದೆ.
ದೂರು ನೀಡಿದ ಸಂತ್ರಸ್ತೆ ಹಾಗೂ ರೆಡ್ಡಿ ಅವರು ಕಾಲೇಜು ದಿನಗಳಿಂದಲೂ ಪರಸ್ಪರ ಪರಿಚಯವಾಗಿ ಕಳೆದ ವರ್ಷ ಫೆಬ್ರವರಿಯಲ್ಲಿ ಮದುವೆ ಆಗಿದ್ದರು. ರೆಡ್ಡಿ ಅವರು ಐಐಟಿ ಬಾಂಬೆಯಿಂದ ಸ್ನಾತಕೋತ್ತರ ಪದವಿ ಮಾಡುವ ಮೊದಲು ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಇತ್ತೀಚೆಗೆ ದಂಪತಿಗಳ ನಡುವಿನ ಸಂಬಂಧ ಹದಗೆಟ್ಟಿದೆ. ಮಹೇಶ್ವರ ರೆಡ್ಡಿ ಅವರು ಯುಪಿಎಸ್ಸಿ ಪರೀಕ್ಷೆ ಮುಗಿಸಿ ಮೇರಿಟ್ ಪಟ್ಟಿಯಲ್ಲಿ 126ನೇ ಸ್ಥಾನ ಪಡೆದ ಬಳಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆಪಾದಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಐಪಿಎಸ್ಗೆ ಆಯ್ಕೆಯಾದಾಗಿನಿಂದ ಅವರು ನನಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಲು ಆರಂಭಿಸಿದರು. ಇದರಿಂದ ಅವರು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಬಹುದು ಎಂದುಕೊಂಡಿದ್ದಾರೆ. ಮಹೇಶ್ವರ ರೆಡ್ಡಿ ನಮ್ಮ ಮದುವೆ ಬಗ್ಗೆ ಅವರ ಪೋಷಕರಿಗೆ ತಿಳಿಸಿಲ್ಲ. ಈ ಕುರಿತು ನಾನು ಮಾತಾಡಿದಾಗ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.