ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಆಮ್ ಆದ್ಮಿ ಪಕ್ಷದೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಇದೀಗ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಎರಡೂ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ - ಆಪ್ ಮೈತ್ರಿಗೆ ದೆಹಲಿ ಕೈ ನಾಯಕರು ಹೈ ಕಮಾಂಡ್ಗೆ ಮನವಿ ಮಾಡುತ್ತಿದ್ದಾರೆ. ಆದರೆ, ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ಧೀಕ್ಷಿತ್ ಮಾತ್ರ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಮಧ್ಯೆ ಮೈತ್ರಿ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ದೆಹಲಿ ನಾಯಕರು ಬದ್ಧರಾಗಿರಬೇಕು ಎಂದು ದೆಹಲಿ ಉಸ್ತುವಾರಿ ಪಿ.ಸಿ. ಚಾಕೋ ಸಹ ಹೇಳಿದ್ದಾರೆ.
ದೆಹಲಿಯ ನಾಯಕರಲ್ಲೇ ಉಂಟಾಗಿರುವ ಗೊಂದಲ ಬಗೆಹರಿಸಲು ಪವಾರ್ ಶ್ರೀ ಕೃಷ್ಣನ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಪವಾರ್ ಇಂದು ಬೆಳಗ್ಗೆ ಕಾಂಗ್ರೆಸ್ ಹಾಗೂ ಆಪ್ನೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಜತೆ ಮಾತನಾಡಿರುವ ಪವಾರ್, ಆಪ್ನ ಸಂಜಯ್ ಸಿಂಗ್ರೊಂದಿಗೂ ಚರ್ಚೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಪ್ರಾಬಲ್ಯವಿರುವ ಬಗ್ಗೆ ಕಾಂಗ್ರೆಸ್ನ ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದಾಗಿನಿಂದ ಕೈ ನಾಯಕರು ಆಪ್ ಜತೆ ಮೈತ್ರಿಯ ಮನಸ್ಸು ಮಾಡಿದ್ದಾರೆ. ರಾಹುಲ್ ಗಾಂಧಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದೆಹಲಿ ಉಸ್ತುವಾರಿ ಪಿ.ಸಿ. ಚಾಕೋ ಹೇಳಿದ್ದಾರೆ.