ಲಕ್ನೋ(ಉತ್ತರಪ್ರದೇಶ):ಇಲ್ಲಿನ ದೆವಾರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಮಿಡಿಯುವ ಘಟನೆವೊಂದು ನಡೆದಿದ್ದು, ರೋಗಿ ಮಲಗಿದ್ದ ಸ್ಟ್ರೆಚರ್ ಎಳೆಯಲು ಆಸ್ಪತ್ರೆ ಸಿಬ್ಬಂದಿಗೆ ಲಂಚ ಕೇಳಿದ ಕಾರಣ ಆರು ವರ್ಷದ ಮಗು ಸ್ಟ್ರೆಚರ್ ತಳ್ಳುವ ಕೆಲಸ ಮಾಡಿದೆ.
ಉತ್ತರಪ್ರದೇಶದ ದೆವಾರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಮಗುವಿನ ಅಜ್ಜನನ್ನು ಆಸ್ಪತ್ರೆಯೊಳಗೆ ಕರೆದೊಯ್ಯಲು ಸ್ಟ್ರೇಚರ್ ಮೇಲೆ ಮಲಗಿಸಲಾಗಿತ್ತು. ಈ ವೇಳೆ ಅದನ್ನ ಎಳೆಯಲು ಹಣ ನೀಡುವಂತೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ. ಆದರೆ ಮಗುವಿನ ತಾಯಿ ಹಣ ನೀಡಲು ಹಿಂದೇಟು ಹಾಕಿದ್ದಾಳೆ. ಹೀಗಾಗಿ ಆರು ವರ್ಷದ ಮಗು ಶಿವಂ ಯಾದವ್ ಹಿಂದಿನಿಂದ ಸ್ಟ್ರೆಚರ್ ತಳ್ಳಿದ್ದಾನೆ.
ಭೂ ವಿವಾದದಿಂದ ಥಳಿತಕ್ಕೊಳಗಾದ ವ್ಯಕ್ತಿಯನ್ನ ಬಾಬು ಮೋಹನ್ ಸಿಂಗ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಕಳೆದ ಮೂರು ದಿನಗಳಿಂದ ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪ್ರತಿದಿನ ಅವರನ್ನ ಡ್ರೆಸ್ಸಿಂಗ್ ಕೋಣೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಈ ವೇಳೆ ಸಿಬ್ಬಂದಿ ಪ್ರತಿ ಸಲ 30 ರೂ. ಕೇಳುತ್ತಾರೆ. ಬಡವರಾಗಿರುವ ಕಾರಣ ಹಣ ನೀಡಲು ನಮ್ಮ ಬಳಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನ ಮಗನಿಂದ ಈ ಕೆಲಸ ಮಾಡಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದಿದ್ದಾರೆ.
ಮಗು ಸ್ಟ್ರೆಚರ್ ತಳ್ಳಿಕೊಂಡು ಹೋಗುತ್ತಿದ್ದ ವೇಳೆ ಅದರ ವಿಡಿಯೋ ಮಾಡಿ ವೈರಲ್ ಮಾಡಲಾಗಿದ್ದು, ಇದೇ ವಿಷಯವಾಗಿ ಆಸ್ಪತ್ರೆ ವೈದ್ಯಾಧಿಕಾರಿ ಮಾತನಾಡಲು ಹಿಂದೇಟು ಹಾಕಿದ್ದಾರೆ. ಸದ್ಯ ಈ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.