ಮಧ್ಯಪ್ರದೇಶ:ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್ ಅಪ್ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಧಾರ್ ಜಿಲ್ಲೆಯ ತಿರಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಖಲಿಯಾ ಗ್ರಾಮದ ಬಳಿಯ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ತಡರಾತ್ರಿ ಈ ಅವಘಡ ಸಂಭವಿಸಿದೆ. ಪಿಕ್ ಅಪ್ ವಾಹನದ ಟೈಯರ್ ಪಂಕ್ಚರ್ ಆದ ಹಿನ್ನೆಲೆ ಕಾರ್ಮಿಕರಿಂದ ತುಂಬಿದ್ದ ವಾಹನ ರಸ್ತೆಯಲ್ಲಿ ನಿಂತಿತ್ತು. ಆಗ ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಪಿಕ್ ಅಪ್ಗೆ ಡಿಕ್ಕಿ ಹೊಡೆದಿದೆ.
ರಸ್ತೆ ಅಪಘಾತದಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದು, 24 ಕಾರ್ಮಿಕರು ಗಾಯಗೊಂಡಿದ್ದಾರೆ. ಅದರಲ್ಲಿ 4 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲಾ ಕಾರ್ಮಿಕರು ಧಾರ್ ಜಿಲ್ಲೆಯ ತಾಂಡಾ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನೆಯ ನಂತರ ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೃತರನ್ನು ಫೌಡಿ ಗ್ರಾಮದ ನಿವಾಸಿಗಳಾದ ಜಿತೇಂದ್ರ (10), ರಾಜೇಶ್ (12), ಕುನ್ವರ್ ಸಿಂಗ್ (40), ಸಂತೋಷ್ (15), ಶರ್ಮಿಳಾ (35) ಹಾಗೂ ಭೂರಿ ಬಾಯಿ (25) ಎಂದು ಗುರುತಿಸಲಾಗಿದೆ.