ಕಾನ್ಪುರ್(ಉತ್ತರ ಪ್ರದೇಶ):ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಸೇರಿ ಒಟ್ಟು 57 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆಘಾತಕಾರಿ ವಿಷಯ ಎಂದರೆ ಕೋವಿಡ್ ಪಾಸಿಟಿವ್ ಬಂದಿರುವವರಲ್ಲಿ ಇಬ್ಬರು ಅಪ್ರಾಪ್ತೆಯರು ಸೇರಿದಂತೆ ಐವರು ಗರ್ಭಿಣಿಯರಾಗಿರುವ ವಿಚಾರ ಬೆಳಕಿಗೆ ಬಂದಿದೆ. ಜೊತೆಗೆ ಗರ್ಭಿಣಿಯರಾದ ಇಬ್ಬರು ಬಾಕಿಯರಿಗೆ ಹೆಚ್ಐವಿ ಪಾಸಿಟಿವ್ ಇದ್ದು, ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಎಎಸ್ಪಿ ದಿನೇಶ್ ಕುಮಾರ್. ಪಿ ಮಾತನಾಡಿ, ವಸತಿ ನಿಲಯದ 57 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಪೈಕಿ ಐವರು ಗರ್ಭಿಣಿಯರಿದ್ದಾರೆ. ಗರ್ಭಿಣಿಯರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿದ್ದು, ಅವರಿಗೆ ಹೆಚ್ಐವಿ ಪಾಸಿಟಿವ್ ಇದೆ. ಇವರೆಲ್ಲರನ್ನೂ ಆಗ್ರಾದ ಮಕ್ಕಳ ಕಲ್ಯಾಣ ಸಮಿತಿ ಇಲ್ಲಿಗೆ ಕಳುಹಿಸಿದೆ. ಇಟಾ, ಕನೌಜ್, ಫಿರೋಜಾಬಾದ್, ಕಾನ್ಪುರದಿಂದ ವಸತಿ ನಿಲಯಕ್ಕೆ ಬಂದಿದ್ದಾರೆ. ಇಲ್ಲಿಗೆ ಬರುವ ಮೊದಲೇ ಇವರೆಲ್ಲರೂ ಗರ್ಭಿಣಿಯರಾಗಿದ್ದರು. ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿರುವುದರಿಂದ ಈ ಪ್ರಕರಣ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗಟ್ಟುವಿಕೆ (ಪೊಕ್ಸೋ) ಕಾಯ್ದೆಯಡಿ ಬರುತ್ತದೆ ಎಂದು ಹೇಳಿದ್ದಾರೆ.