ಮುಜಫರ್ನಗರ (ಉತ್ತರ ಪ್ರದೇಶ):ಮದುವೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟದ ವೇಳೆ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ನಡೆದಿದೆ.
ಗಾಯಾಳುಗಳನ್ನು ಸವನ್, ಉಮ್ಮದ್, ರಿಹಾನ್, ಅಂಕಿತ್, ಮತ್ತು ಅಮೀರ್ ಎಂದು ಗುರುತಿಸಲಾಗಿದೆ. ಶಹಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲ್ಡಾ ಗ್ರಾಮದಲ್ಲಿ ವರನ ಕಡೆಯವರಿಂದ ನಡೆಯುತ್ತಿದ್ದ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.
ಪಟಾಕಿ ತುಂಬಿದ್ದ ಚೀಲಕ್ಕೆ ಬೆಂಕಿ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ವೃತ್ತ ಅಧಿಕಾರಿ ವಿರ್ಜಾ ಶಂಕರ್ ತ್ರಿಪಾಠಿ ತಿಳಿಸಿದ್ದಾರೆ. ಮಕ್ಕಳು ಮದುವೆ ಮೆರವಣಿಗೆಯನ್ನು ನೋಡುತ್ತಾ ಹತ್ತಿರದಲ್ಲೇ ನಿಂತಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಮೀರತ್ ಪೊಲೀಸರು ಭಾನುವಾರ ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮ ಪಟಾಕಿ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರ್ನಾಲ್ಕು ಮನೆಗಳಲ್ಲಿ ಪಟಾಕಿಗಳನ್ನು ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ನಂತರ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.